Dandeli ಅವನತಿಯತ್ತ ದಾಂಡೇಲಿ ವಸತಿಗೃಹ

ದಾಂಡೇಲಿಯ ಸೋಮಾನಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗಾಗಿ ನಿರ್ಮಿಸಲಾಗಿದ್ದ ವಸತಿ ಗೃಹ.
ದಾಂಡೇಲಿಯ ಸೋಮಾನಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗಾಗಿ ನಿರ್ಮಿಸಲಾಗಿದ್ದ ವಸತಿ ಗೃಹ.
Published on

ಪ್ರಮುಖ ಮುಖ್ಯಾಂಶಗಳು

  • ಬಾಡಿಗೆ ಮನೆಯಲ್ಲಿಯೇ ವೈದ್ಯರ ವಾಸ
  • ಶಿಥಿಲಗೊಂಡ ಕಟ್ಟಡಗಳಿಗೆ ಬೇಕಿದೆ ಕಾಯಕಲ್ಪ

ಅಕ್ಷಯಗಿರಿ ಗೋಸಾವಿ ದಾಂಡೇಲಿ

ನಗರದ ಸೋಮಾನಿ ವೃತ್ತದ ಸಮೀಪದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗಾಗಿ ನಿರ್ಮಿಸಲಾಗಿದ್ದ ವಸತಿಗೃಹಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿವೆ. ಗಿಡಗಂಟಿಗಳ ಮಧ್ಯೆ ಮುಳುಗಿ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಬದಲಾಗಿವೆ.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯ ನಡುವೆಯೇ ಆರೋಗ್ಯ ಸೇವೆ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ಸರ್ಕಾರಿ ವಸತಿ ಸೌಲಭ್ಯಗಳ ಕೊರತೆಯೂ ಇದೆ ಎನ್ನಲಾಗಿದೆ. ಇತ್ತೀಚಿನ ವಷರ್ಗಳಲ್ಲಿ ಕೆಲವು ಹೊಸ ವಸತಿಗೃಹಗಳನ್ನು ನಿರ್ಮಿಸಲಾಗಿದ್ದರೂ, ಹಲವಾರು ವೈದ್ಯರು ಮತ್ತು ಸಿಬ್ಬಂದಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ವಸತಿಗೃಹಗಳ ಸುತ್ತಮುತ್ತ ಬೆಳೆದಿರುವ ದಟ್ಟ ಗಿಡಗಂಟಿ, ಮುಳ್ಳಿನ ಪೊದೆ ಹಾಗೂ ಎತ್ತರದ ಹುಲ್ಲುಗಳು ಕಟ್ಟಡಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಹಲವು ವಷರ್ಗಳಿಂದ ಸ್ವಚ್ಛತೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಟ್ಟಡಗಳ ಮೇಲ್ಛಾವಣಿಗಳ ಮೇಲೆಯೇ ಹುಲ್ಲು, ಸಣ್ಣ ಗಿಡಗಳು ಬೆಳೆದಿದ್ದು, ಛಾವಣಿಗಳು ಕುಸಿಯುವ ಅಪಾಯದಲ್ಲಿವೆ.
ಈ ವಸತಿಗೃಹಗಳ ಕಿಟಕಿಗಳು, ಬಾಗಿಲುಗಳು, ಮರದ ಚೌಕಟ್ಟುಗಳು ಸೇರಿದಂತೆ ಒಳಭಾಗದಲ್ಲಿದ್ದ ಅನೇಕ ವಸ್ತುಗಳನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ವಿದ್ಯುತ್ ಬೋರ್ಡ್‌ಗಳು, ವೈರಿಂಗ್, ಕೊಳವೆಗಳು ಸೇರಿದಂತೆ ಹಲವು ಸಾಮಗ್ರಿಗಳು ಕಾಣೆಯಾಗಿವೆ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಒಳಭಾಗ ಸಂಪೂರ್ಣ ಹಾಳಾಗಿದ್ದು, ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.
ಕ್ವಾರ್ಟರ್ಸ್ ಸುತ್ತಮುತ್ತ ಮದ್ಯದ ಬಾಟಲಿಗಳು, ಗುಟ್ಕಾ-ಸಿಗರೇಟ್ ಪ್ಯಾಕೆಟ್ ಸೇರಿದಂತೆ ಹಲವು ವಸ್ತುಗಳ ಅವಶೇಷಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡುಬರುತ್ತಿದೆ. ಈ ಪ್ರದೇಶದಲ್ಲಿ ರಾತ್ರಿ ವೇಳೆ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಕುಡುಕರ ಅಡ್ಡೆಯಾಗಿದೆ. ಬಾಗಿಲುಗಳೇ ಇಲ್ಲದ ಕಾರಣ ಯಾರಿಗೂ ಅಡ್ಡಿಯಿಲ್ಲದೆ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಅನೈತಿಕ ಚಟುವಟಿಕೆಗಳಿಗೆ ಈ ಕಟ್ಟಡಗಳು ಆಶ್ರಯ ತಾಣವಾಗುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೂ ಕೆಲ ಪುಂಡರು ರಾತ್ರಿ ಕಾಂಪೌಂಡ್ ಜಿಗಿದು ಒಳಗೆ ಹೋಗುತ್ತಾರೆ. ಆದರೆ, ಅದರಿಂದ ಒಳಗೆ ಏನು ನಡೆಯುತ್ತಿದೆ ಎಂಬುದು ಹೊರಗಿನಿಂದ ಗೋಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹೃದಯ ಭಾಗದಲ್ಲಿ ಇಂತಹ ಶಿಥಿಲ ಕಟ್ಟಡಗಳು ಉಳಿದಿರುವುದು ಸಾರ್ವಜನಿಕ ಆಸ್ತಿಯ ನಿರ್ಲಕ್ಷೃವನ್ನು ಸಾರಿ ಹೇಳುತ್ತದೆ. ಈ ಕಟ್ಟಡಗಳನ್ನು ಸಂಪೂರ್ಣವಾಗಿ ನವೀಕರಿಸಿ ವೈದ್ಯರಿಗೆ ಮತ್ತೆ ವಸತಿ ಕಲ್ಪಿಸಬೇಕೋ ಅಥವಾ ಅವುಗಳನ್ನು ತೆರವುಗೊಳಿಸಿ ಆಧುನಿಕ ಸೌಲಭ್ಯಗಳಿರುವ ಹೊಸ ವಸತಿ ಸಮುಚ್ಚಯ ನಿರ್ಮಿಸಬೇಕೋ ಎಂಬ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕಿದೆ. ವೈದ್ಯರಿಗೆ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸಿದರೆ ತುರ್ತು ಆರೋಗ್ಯ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಲಿವೆ. ಆದ್ದರಿಂದ ಈ ನಿರ್ಲಕ್ಷ್ಯಕ್ಕೆ ತೆರೆ ಎಳೆದು, ಶಿಥಿಲಗೊಂಡಿರುವ ಕಟ್ಟಡಗಳಿಗೆ ಹೊಸ ಕಾಯಕಲ್ಪ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರಿ ಆಸ್ಪತ್ರೆಯ ವೈದ್ಯರಿಗಾಗಿ ನಿರ್ಮಿಸಲಾಗಿದ್ದ ವಸತಿ ಗೃಹಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಕಿಡಿಗೇಡಿಗಳು ಹಾಗೂ ಅನೈತಿಕ ಚಟುವಟಿಕೆಗಳಿಗೆ ಈ ಕಟ್ಟಡಗಳು ಆಶ್ರಯ ತಾಣವಾಗುತ್ತಿವೆ. ಇದರ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕಿದ್ದು ವೈದ್ಯರಿಗೆ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸಿದರೆ ತುರ್ತು ಆರೋಗ್ಯ ಸೇವೆಗಳೂ ಇನ್ನಷ್ಟು ಪರಿಣಾಮಕಾರಿಯಾಗಲಿವೆ.

— ದಶರಥ ಬಂಡಿವಡ್ಡರ, ನಗರಸಭೆ ಮಾಜಿ ಸದಸ್ಯ

"

ಸಾರ್ವಜನಿಕ ಆಸ್ಪತ್ರೆಯಿಂದ ಸುಮಾರು 50 ವಷರ್ಗಳ ಹಿಂದೆ 23 ವಸತಿ ಗೃಹಗಳು, ಒಂದು ಧೋಬಿ ಘಾಟ್, ಒಂದು ಅಡುಗೆ ಕಟ್ಟಡ ನಿರ್ಮಿಸಲಾಗಿತ್ತು. ಪ್ರಸ್ತತ ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ವಾಸಿಸಲು ಯೋಗ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಪ್ರಮಾಣಪತ್ರ ನೀಡಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

— ಅನಿಲ ಕುಮಾರ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net