ಭಟ್ಕಳ: ನಗರದ ಶ್ರೀ ಚನ್ನಪಟ್ಟಣ ಹನುಮಂತ ದೇವಾಲಯದ ಪಕ್ಕದ ಆವರಣದಲ್ಲಿ ನಿಂತಿದ್ದ ಹಸುವನ್ನು ದುಷ್ಕರ್ಮಿಗಳು ಕಾರಿನಲ್ಲಿ ತುಂಬಿಕೊಂಡು ಪರಾರಿಯಾದ ಘಟನೆ (Cow Theft) ಸೋಮವಾರ ನಸುಕಿನಲ್ಲಿ ನಡೆದಿದೆ.
ಬೆಳಗಿನಜಾವ ದೇವಸ್ಥಾನ ಆವರಣಕ್ಕೆ ನುಗ್ಗಿದ ಗೋ ಕಳ್ಳರು ಮಲಗಿದ್ದ ಹಸುವನ್ನು ಇಬ್ಬರು ಮೂವರು ಸೇರಿ ಬಲವಂತವಾಗಿ ಎತ್ತಿ ಐಷಾರಾಮಿ ಕಾರಿನಲ್ಲಿ ಹಾಕಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಗರದ ನಡುಬೀದಿಯಲ್ಲೇ ಇಂತಹ ಕಳವು ನಡೆದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಭದ್ರತೆ ಕುರಿತು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗಾಗಿ ಪೊಲೀಸರು ಪರಿಶ್ರಮ ಆರಂಭಿಸಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ.
ಇತ್ತೀಚೆಗೆ ಭಟ್ಕಳದ ಅರಣ್ಯ ಪ್ರದೇಶದಲ್ಲಿ ನೂರಾರು ಗೋವುಗಳ ಅಸ್ತಿಪಂಜರಗಳು ಪತ್ತೆಯಾಗಿದ್ದ ಪ್ರಕರಣ ಮಾಸುವ ಮುಂಚೆಯೇ ಮತ್ತೆ ಗೋ ಕಳ್ಳರು ಅಟ್ಟಹಾಸ ಮೆರೆದಿರುವುದು ಸಾರ್ವಜನಿಕರಲ್ಲಿ ಕಳವಳ ಹೆಚ್ಚಿಸಿದೆ.
ಗೋವು ಕದ್ದಿದ್ದ ಇಬ್ಬರ ಬಂಧನ
ಪಟ್ಟಣದ ಹನುಮಂತ ದೇವಸ್ಥಾನದ ಬಳಿಯಿಂದ ಗೋ ಕಳ್ಳತನದ ಸುದ್ದಿ ಬೆಳಕಿಗೆ ಬರುತ್ತಿರುವಂತೆ ಎಚ್ಚೆತ್ತ ಪೊಲೀಸರು ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೌಥನಿಯ ರೇಹಾನ್, ಮದಿನಾಕಾಲನಿಯ ಫೈಜಾನ್ ಬಂಧಿತರು.
ಭಟ್ಕಳ ಬೈಪಾಸ್ ಮಾರ್ಗವಾಗಿ ಗೋಕಳ್ಳರು ಪರಾರಿಯಾಗಿದ್ದ ಮಾಹಿತಿಯನ್ನು ಆಧರಿಸಿ ಸಿಪಿಐ ದಿವಾಕರ ಮಾರ್ಗದರ್ಶನದಲ್ಲಿ ಪಿಎಸ್‌ಐ ನವೀನ್ ಹಾಗೂ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.