ಶಿರಸಿ: ಬಿಜೆಪಿ ಮೊದಲಿನಿಂದಲೂ ಶೇ. 33 ಮೀಸಲಾತಿಗೆ womens reservation ಬದ್ಧವಾಗಿದ್ದು, ಈ ಹಿನ್ನೆಲೆಯಲ್ಲೇ ಸಂಸತ್ತಿನಲ್ಲಿ ಬಿಲ್ ಮಂಡಿಸಿದೆ. ಆದರೆ, ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣದಿಂದ ಸಂಸತ್ ಅಧಿವೇಶನದ ಸಮಯ ಹಾಳಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಿವೇಶನದಲ್ಲಿ ಮುಖ್ಯವಾಗಿ ಎರಡು ಬಿಲ್‌ಗಳನ್ನು ಮಂಡಿಸಲಾಗಿತ್ತು. ಮುಖ್ಯವಾಗಿ ಮಹಿಳಾ ಮೀಸಲಾತಿ ಬಿಲ್ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸಿದೆ.
ಕಾಂಗ್ರೆಸ್ ಮೊದಲಿನಿಂದಲೂ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತ ಬಂದಿದೆಯೇ ಹೊರತು, ಅದನ್ನು ಅನುಷ್ಠಾನಗೊಳಿಸುವ ವಿಷಯ ಬಂದಾಗಲೆಲ್ಲಾ ತನ್ನದೆ ಆದ ಷಡ್ಯಂತ್ರ ರೂಪಿಸಿ ಮಹಿಳೆಯರು ಮುಖ್ಯವಾಹಿನಿಗೆ ಬರದಂತೆ ನೋಡಿಕೊಂಡಿದೆ.
ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ನಂತರ 2029 ರ ವೇಳೆಗೆ ಇದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ಪಕ್ಷದವರು ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಅದನ್ನೇ ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಅವರ ಈ ದ್ವಿಮುಖ ನೀತಿ ಮತ್ತು ದೇಶವಿರೋಧಿ, ಮಹಿಳಾ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಕರ್ನಾಟಕದಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾಗುವುದಿಲ್ಲ, ಬದಲಿಗೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಾಗಲಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವರು ಮತ್ತು ಪ್ರಧಾನ ಮಂತ್ರಿಗಳೇ ಅಂಕಿ-ಅಂಶಗಳ ಸಮೇತ ಸ್ಪಷ್ಟಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ತನ್ನ ಹಳೆಯ ಒಡೆದು ಆಳುವ ನೀತಿಯನ್ನು ಮುಂದುವರಿಸುತ್ತ ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ವಿಂಗಡಣೆಯಿಂದ ತಮ್ಮ ಕುಟುಂಬದ ಕ್ಷೇತ್ರಗಳು ಎಲ್ಲಿ ಬದಲಾಗಬಹುದು ಎಂಬ ಕಾರಣಕ್ಕಾಗಿ ಇಂಡಿ ಸಂಘಟನೆಯೊಂದಿಗೆ ವಿರೋಧ ಮಾಡಿದೆ ಎಂದರು.