ಹೊಂದಾಣಿಕೆಯೇ ದಾಂಪತ್ಯದ ಜೀವಾಳ

ಕುಟುಂಬ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ದಂಪತಿ ತಮ್ಮ ಪಟ್ಟು, ಹಠ ಹಾಗೂ ಅಹಂಗಳನ್ನು ಸಡಿಲಿಸಿಕೊಂಡು ಪರಸ್ಪರ ಹೊಂದಾಣಿಕೆ, ವಿಶ್ವಾಸ ಮತ್ತು ಗೌರವದಿಂದ ಬದುಕಬೇಕು.
SWARNAVALLI SHREE BLESSED DEVOTEES
ಶಿರಸಿಯ ಧನ್ಯೋ ಗ್ರಹಸ್ತಾಶ್ರಮದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. ಅನಂತಮೂರ್ತಿ ಭಟ್, ಸೀತಾರಾಮ ಭಟ್, ಗೀತಾ ಹೆಗಡೆ, ವಿ.ಎಂ. ಹೆಗಡೆ ತ್ಯಾಗಲಿ ಇತರರಿದ್ದರು.
Published on
Summary

ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ

‘ಧನ್ಯೋ ಗೃಹಸ್ಥಾಶ್ರಮ’ ದಂಪತಿ ಶಿಬಿರ

ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದಿಂದ ಆಯೋಜನೆ

ಶಿರಸಿ: ಇಂದಿನ ದಿನಗಳಲ್ಲಿ ವಿವಾಹ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ಕುಟುಂಬ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ದಂಪತಿ ತಮ್ಮ ಪಟ್ಟು, ಹಠ ಹಾಗೂ ಅಹಂಗಳನ್ನು ಸಡಿಲಿಸಿಕೊಂಡು ಪರಸ್ಪರ ಹೊಂದಾಣಿಕೆ, ವಿಶ್ವಾಸ ಮತ್ತು ಗೌರವದಿಂದ ಬದುಕಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಸ್ವರ್ಣವಲ್ಲೀಯಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಮ್ಮಿಕೊಂಡ ‘ಧನ್ಯೋ ಗೃಹಸ್ಥಾಶ್ರಮ’ ದಂಪತಿ ಶಿಬಿರದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಕುಟುಂಬವು ಧರ್ಮ ಹಾಗೂ ಸಂಸ್ಕಾರದ ಮೂಲ ಕೇಂದ್ರವಾಗಿದೆ.

ಗಂಡ-ಹೆಂಡತಿಯ ನಡುವಿನ ಸಂಬಂಧ ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿರದೆ, ಕುಟುಂಬದ ಮುಂದಿನ ಪೀಳಿಗೆಯ ವ್ಯಕ್ತಿತ್ವ ನಿರ್ಮಾಣಕ್ಕೂ ಕಾರಣವಾಗುತ್ತದೆ. ಹೀಗಾಗಿ ದಾಂಪತ್ಯದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಅಗ್ನಿ ಹಾಗೂ ದೇವತೆಗಳ ಸಾಕ್ಷಿಯಾಗಿ ನಡೆದ ವಿವಾಹ ಸಂಬಂಧವನ್ನು ಜೀವನ ಪರ್ಯಂತ ಗೌರವದಿಂದ ಕಾಪಾಡಿಕೊಳ್ಳುವ ಸಂಕಲ್ಪ ದಂಪತಿಯಲ್ಲಿರಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರೂ ಅವುಗಳನ್ನು ಹಠ ಅಥವಾ ಅಹಂಕಾರದಿಂದ ದೊಡ್ಡದಾಗಿಸಿಕೊಳ್ಳದೆ, ಮಾತುಕತೆ ಹಾಗೂ ಪರಸ್ಪರ ವಿಶ್ವಾಸದ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳು ಪೋಷಕರ ನಡೆ-ನುಡಿಗಳನ್ನು ಗಮನಿಸಿ ಕಲಿಯುತ್ತಾರೆ. ಆದ್ದರಿಂದ ಪೋಷಕರು ತಾವು ಆಚರಿಸುವ ಮೌಲ್ಯಗಳನ್ನು ಮಕ್ಕಳ ಜೀವನದಲ್ಲಿಯೂ ಅಳವಡಿಸುವಂತಹ ವಾತಾವರಣವನ್ನು ಕುಟುಂಬದಲ್ಲಿ ನಿರ್ಮಿಸಬೇಕು.

ಮನೆಯ ವಾತಾವರಣವೇ ಮಕ್ಕಳ ವ್ಯಕ್ತಿತ್ವ ರೂಪಿಸುವ ಮೊದಲ ಪಾಠಶಾಲೆಯಾಗಬೇಕು. ಗೃಹಸ್ಥಾಶ್ರಮವು ವೈಯಕ್ತಿಕ ಸುಖಕ್ಕಾಗಿ ಮಾತ್ರ ಇರುವ ವ್ಯವಸ್ಥೆಯಲ್ಲ. ಕುಟುಂಬ, ಸಮಾಜ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಗಹಸ್ಥರ ಮೇಲಿದೆ.

ದಂಪತಿ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಅರಿತು ಜೀವನ ನಡೆಸಿದಾಗ ಕುಟುಂಬದಲ್ಲಿ ನೆಮ್ಮದಿ, ಪ್ರೀತಿ ಮತ್ತು ಸೌಹಾರ್ದತೆ ನೆಲೆಸುತ್ತದೆ ಎಂದರು.

ಶಿಬಿರದಲ್ಲಿ ಗೃಹಸ್ಥಾಶ್ರಮದ ಧರ್ಮ, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಕುಟುಂಬ ಮೌಲ್ಯಗಳ ಸಂರಕ್ಷಣೆ ಹಾಗೂ ಮಕ್ಕಳಿಗೆ ನೈತಿಕ ಮತ್ತು ಸಾಂಸ್ಕೃತಿಕ ಸಂಸ್ಕಾರ ನೀಡುವ ಮಹತ್ವದ ಕುರಿತು ಮಾರ್ಗದರ್ಶನ ವಿ. ಅನಂತಮೂರ್ತಿ ಭಟ್ಟ, ವೇ. ಸೀತಾರಾಮ ಭಟ್ಟ ಮತ್ತಿಗಾರ, ಡಾ. ವಸಂತ ಭಟ್ಟ, ಡಾ. ಭಾವನಾ ಭಟ್ಟ, ವಿನಾಯಕ ಹೆಬ್ಬಾರ ನೀಡಿದರು.

ಕಾರ್ಯಕ್ರಮದಲ್ಲಿ ವಿ.ಎಂ. ಹೆಗಡೆ ತ್ಯಾಗಲಿ, ಗೀತಾ ಎಚ್. ಹೆಗಡೆ ಶಿಗೇಮನೆ ಹಾಗೂ ಶ್ರೀನಿವಾಸ ಮತ್ತಿಘಟ್ಟ ಉಪಸ್ಥಿತರಿದ್ದರು. 27 ನವದಂಪತಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net