ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಕಲ ಸೌಲಭ್ಯ ಶೀಘ್ರ

ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಸಚಿವ ದಿನೇಶ ಗುಂಡೂರಾವ್ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ  ಲೋಕಾರ್ಪಣೆಗೊಳಿಸಿದರು. ಭೀಮಣ್ಣ ನಾಯ್ಕ, ಕೆ.ಜಿ. ನಾಗರಾಜ, ಎಂ.ಆರ್. ಕುಲಕರ್ಣಿ, ಡಾ.ಕುಸುಮಾ, ಡಾ.ಶಂಕರರಾವ್ , ಡಾ.ಲಕ್ಷ್ಮೀಕಾಂತ ನಾಯ್ಕ ಇದ್ದರು.
ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಸಚಿವ ದಿನೇಶ ಗುಂಡೂರಾವ್ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಲೋಕಾರ್ಪಣೆಗೊಳಿಸಿದರು. ಭೀಮಣ್ಣ ನಾಯ್ಕ, ಕೆ.ಜಿ. ನಾಗರಾಜ, ಎಂ.ಆರ್. ಕುಲಕರ್ಣಿ, ಡಾ.ಕುಸುಮಾ, ಡಾ.ಶಂಕರರಾವ್ , ಡಾ.ಲಕ್ಷ್ಮೀಕಾಂತ ನಾಯ್ಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ದಿನೇಶ ಗುಂಡೂರಾವ್ ಭರವಸೆ
  • ಕಮ್ಯೂನಿಟಿ ಹೆಲ್ತ್ ಸೆಂಟರ್ ಕಟ್ಟಡ ಉದ್ಘಾಟನೆ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿದ್ದು ಅವುಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಪೂರೈಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ತಾಲೂಕಿನ ಕ್ಯಾದಗಿಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೇವಲ ಕಟ್ಟಡಗಳಿಂದ ಜನರಿಗೆ ಆರೋಗ್ಯ ಸಿಗಲು ಸಾಧ್ಯವಿಲ್ಲ. ಉತ್ತಮ ವೈದ್ಯರು ಮತ್ತು ಸಿಬ್ಬಂದಿ ವರ್ಗ ಇದ್ದಾಗ ಮಾತ್ರ ಅದು ಸಾಧ್ಯ. ಕಾಯಿಲೆಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿಯೂ ಮುಖ್ಯ ಕಾರಣ. ಆದರೆ, ಹಳ್ಳಿಗಳಲ್ಲಿನ ಜನ ದೈಹಿಕ ಶ್ರಮ ವಹಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಶಿರಸಿಯ ಆಸ್ಪತ್ರೆಗೆ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆ ಪಡೆಯುವ ಬದಲು ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಗೃಹ ಆರೋಗ್ಯ ಯೋಜನೆ ಜಾರಿ ಮಾಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಸರ್ಕಾರ ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದು ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯ ಬೆಳಗಾವಿ ವಿಭಾಗದ ಸಹ ನಿರ್ದೇಶಕಿ ಡಾ. ಪುಷ್ಪಾ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಕ್ಯಾದಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕುಸುಮಾ ಇತರರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರರಾವ್ ಸ್ವಾಗತಿಸಿದರು. ರಜನಿ ಪ್ರಶಾಂತ ನಾಯ್ಕ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಮತಾ ಕೊಡಿಯಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net