

ಕಾರವಾರ: ಪಾದವಿಕೃತಿ ಅಥವಾ ಕ್ಲಬ್ ಫುಟ್ ಚಿಕಿತ್ಸಾಲಯವನ್ನು ಇಲ್ಲಿನ ಕ್ರಿಮ್ಸ್ನಲ್ಲಿ ಶುಕ್ರವಾರ ಉದ್ಘಾಟಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದಲ್ಲಿ ಸರ್ವ್ ಟುಗೆದರ್ ಫೌಂಡೇಶನ್ ಎಂಬ ಸಂಸ್ಥೆ ಈ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನಡೆಸುತ್ತಿದೆ.
ಕ್ಲಬ್ ಫುಟ್ ಎಂಬುದು ಹುಟ್ಟಿನಿಂದಲೇ ಬರುವ ದೈಹಿಕ ನ್ಯೂನ್ಯತೆಯಾಗಿದೆ. ಸರ್ವ್ ಟುಗೆದರ್ ಸಂಸ್ಥೆಯು ಪೋನ್ಸೆಟ್ ಎಂಬ ವಿಧಾನದ ಮೂಲಕ ಪಾದಗಳನ್ನು ಮೃದುಗೊಳಿಸಿ, ಅದಕ್ಕೆ ಪ್ಲಾಸ್ಟರ್ ಹಾಕುವ ಮೂಲಕ ಪಾದಗಳನ್ನು ಸಾಮಾನ್ಯ ಸ್ಥಿತಿಗೆ ತಂದು ನಡೆದಾಡಲು ಅನುಕೂಲವಾಗುವಂತೆ ಮಾಡಲಿದೆ. ಹುಟ್ಟಿನಿಂದ 2 ವರ್ಷದೊಳಗಿನ ಮಕ್ಕಳಿಗೆ ಈ ಚಿಕಿತ್ಸೆ ಸುಲಭವಾಗಿದೆ. 5 ವರ್ಷದವರೆಗಿನ ಮಕ್ಕಳಿಗೆ ಸಣ್ಣ ಶಸ್ತ್ರ ಚಿಕಿತ್ಸೆ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ರಾಜ್ಯದ 15 ಕಡೆ ಈಗಾಗಲೇ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಉಚಿತ ಆಪ್ತ ಸಮಾಲೋಚನೆ, ಚಿಕಿತ್ಸೆ ನೀಡುತ್ತಿದೆ ಎಂದು ಸರ್ವ್ ಟುಗೆದರ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕ್ರಿಮ್ಸ್ ನಿರ್ದೇಶಕಿ ಡಾ. ಪೂರ್ಣಿಮಾ ಆರ್.ಟಿ. ಅವರು ಕೇಂದ್ರವನ್ನು ಉದ್ಘಾಟಿಸಿದರು. ಡಿಎಚ್ಒ ಡಾ. ಸಂಜಯ ದೊಡ್ಡಮನಿ ಅವರು ಚಿಕಿತ್ಸಾಲಯವನ್ನು ಉದ್ಘಾಟಿಸಿದರು. ಆರ್ಸಿಎಚ್ಒ ಡಾ. ನಟರಾಜ್ ಕೆ., ಎಲುಬು, ಕೀಲು ವಿಭಾಗದ ಮುಖ್ಯಸ್ಥ, ಡಾ. ಮಧುಕರ್ ಕೆ.ಟಿ.ಇದ್ದರು.