13580 ಲಕ್ಷ ರೂ.ಗಳ ಬಜೆಟ್ ಮಂಡನೆ

ಶಿರಸಿ ತಾಪಂನಲ್ಲಿ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಬಜೆಟ್ ಮಂಡಿಸಿದರು. ಇಒ ಚೆನ್ನಬಸಪ್ಪ ಹಾವಣಗಿ ಇದ್ದರು.
ಶಿರಸಿ ತಾಪಂನಲ್ಲಿ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಬಜೆಟ್ ಮಂಡಿಸಿದರು. ಇಒ ಚೆನ್ನಬಸಪ್ಪ ಹಾವಣಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿರಸಿ ತಾಪಂ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಡಾ.ಬಿ.ಪಿ. ಸತೀಶ ಮಾಹಿತಿ
ಶಿರಸಿ: ತಾಲೂಕು ಪಂಚಾಯಿತಿ 2026-27ನೇ ಸಾಲಿಗಾಗಿ 13580.08 ಲಕ್ಷ ರೂ.ಗಳ ಬಜೆಟ್ ಅನ್ನು ಗುರುವಾರ ಮಂಡಿಸಿದೆ. ತಾಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಡಾ.ಬಿ.ಪಿ. ಸತೀಶ ಅಧ್ಯಕ್ಷತೆಯಲ್ಲಿ ಏರ್ಪಾಟಾಗಿದ್ದ ಮಾಸಿಕ ಕೆಡಿಪಿ ಹಾಗೂ ಸಾಮಾನ್ಯ ಸಭೆಯಲ್ಲಿ ಈ ಬಜೆಟ್ ಮಂಡಿಸಲಾಯಿತು.
ಶಿಕ್ಷಣ ಇಲಾಖೆಗೆ ವೇತನಕ್ಕಾಗಿ 11874.59 ಲಕ್ಷ ರೂ., ವೇತನೇತರಕ್ಕೆ 67.71 ಲಕ್ಷ ರೂ, ಒಟ್ಟೂ 11942.30 ಲಕ್ಷ ರೂ., ಆರೋಗ್ಯ ಇಲಾಖೆಗೆ ವೇತನಕ್ಕಾಗಿ 15.92 ಲಕ್ಷ ರೂ., ವೇತನೇತರಕ್ಕೆ 5.30 ಲಕ್ಷ ರೂ., ಒಟ್ಟೂ 21.22 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆಗೆ ವೇತನಕ್ಕಾಗಿ 81.57 ಲಕ್ಷ ರೂ., ವೇತನೇತರಕ್ಕಾಗಿ 67.58 ಲಕ್ಷ ರೂ., ಒಟ್ಟೂ 149.15 ಲಕ್ಷ ರೂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವೇತನಕ್ಕಾಗಿ 15.08 ಲಕ್ಷ ರೂ., ವೇತನೇತರಕ್ಕೆ 6.74 ಲಕ್ಷ ರೂ., ಒಟ್ಟೂ 21.82 ಲಕ್ಷ ರೂ., ಶಿಶು ಅಭಿವೃದ್ಧಿ ಯೋಜನೆಗೆ ವೇತನಕ್ಕಾಗಿ 181.14 ಲಕ್ಷ ರೂ., ವೇತನೇತರಕ್ಕಾಗಿ 181.90 ಲಕ್ಷ ರೂ. ಒಟ್ಟೂ 363.04 ಲಕ್ಷ ರೂ., ಕೃಷಿ ಇಲಾಖೆಗೆ ವೇತನಕ್ಕಾಗಿ 27.27 ಲಕ್ಷ ರೂ., ವೇತನೇತರಕ್ಕೆ 6.66 ಲಕ್ಷ ರೂ., ಒಟ್ಟೂ 33.93 ಲಕ್ಷ ರೂ., ತೋಟಗಾರಿಕೆ ಇಲಾಖೆಗೆ ಯಾವುದೇ ಅನುದಾನ ಹಂಚಿಕೆ ಮಾಡಲಾಗಿಲ್ಲ. ಪಶು ಸಂಗೋಪನಾ ಇಲಾಖೆಗೆ ವೇತನಕ್ಕಾಗಿ 248.68 ಲಕ್ಷ ರೂ., ವೇತನೇತರಕ್ಕೆ 22 ಲಕ್ಷ ರೂ., ಒಟ್ಟೂ 270.68 ಲಕ್ಷ ರೂ., ಗ್ರಾಮೀಣಾಭಿವೃದ್ಧಿಗೆ ವೇತನಕ್ಕೆ 706.89 ಲಕ್ಷ ರೂ., ವೇತನೇತರಕ್ಕೆ 71.05 ಲಕ್ಷ ರೂ., ಒಟ್ಟೂ 777.94 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ತಾಪಂ ಆಡಳಿತಾಧಿಕಾರಿ ಡಾ.ಬಿ.ಪಿ. ಸತೀಶ ಮಾತನಾಡಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾದರೂ ರಸಗೊಬ್ಬರದ ಕೊರತೆಯಿಲ್ಲ. ಕೆಲ ತಪ್ಪು ಮಾಹಿತಿಗಳಿಂದ ಗೊಂದಲ ಸೃಷ್ಟಿಯಾಗುತ್ತಿದೆ. ನರೇಗಾ ಯೋಜನೆಯು ಕೆಲ ರಾಜ್ಯಗಳಲ್ಲಿ ಜಿ ರಾಮ್ ಜಿ ಯೋಜನೆಯಾಗಿ ಪರಿವರ್ತನೆಯಾಗಿದ್ದು, ನಮ್ಮ ರಾಜ್ಯದಲ್ಲಿಯೂ ಅನುಷ್ಠಾನಗೊಂಡ ಬಳಿಕ ಮಾರ್ಗಸೂಚಿ ಬದಲಾವಣೆಯಾಗಲಿದೆ. ಬಾಕಿ ಉಳಿದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ವಿಶೇಷವಾಗಿ ಅರಣ್ಯ ಇಲಾಖೆಯು ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾಹಿತಿ ನೀಡಿ, ಬೆಳೆ ವಿಮೆಯಲ್ಲಿ ಕೆಲ ರೈತರ ಹೆಸರು ಕೈ ಬಿಡಲಾಗಿದೆ. ಅವರ ಹೆಸರನ್ನು ಗ್ರಾಪಂವಾರು ಪಟ್ಟಿ ಪ್ರಕಟಿಸಲಾಗಿದೆ. ಆ ರೈತರು ಕೃಷಿ ಇಲಾಖೆ ಸಂಪರ್ಕಿಸಬಹುದು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದು, ಅಲ್ಲಿ ಪ್ರಸ್ತಾಪಿಸಿ ಬೆಳೆ ವಿಮೆಯಡಿ ಹೆಸರು ಸೇರ್ಪಡೆ ಮಾಡಲಾಗುತ್ತದೆ. ಮೇ ಅಂತ್ಯದಲ್ಲಿ ಮುಂಗಾರು ರಾಜ್ಯಕ್ಕೆ ಪ್ರವೇಶವಾಗಲಿದೆ. ಕೃಷಿ ಹೊಂಡಕ್ಕೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಆಸಕ್ತ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು ಎಂದರು.
ತಾಪಂ ಇಒ ಚೆನ್ನಬಸಪ್ಪ ಹಾವಣಗಿ ಇದ್ದರು. ತಾಪಂ ಲೆಕ್ಕಾಧಿಕಾರಿ ಸೀತಾರಾಮ ನಾಯ್ಕ ವಾರ್ಷಿಕ ಲೆಕ್ಕ ಮಂಡಿಸಿದರು.
ಯೂರಿಯಾ ಗೊಬ್ಬರ ಖರೀದಿಸಲು ರೈತರು ಎಫ್‌ಐಡಿ ಮೂಲಕ ಆಪ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ವರ್ಷ ಗೊಬ್ಬರದ ಸಮಸ್ಯೆ ಉದ್ಭವವಾಗುವುದಿಲ್ಲ. ರೈತರು ಭಯಪಡುವ ಅವಶ್ಯಕತೆಯಿಲ್ಲ.
ಮಧುಕರ ನಾಯ್ಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
-------------
ಫೊಟೋ: 30ಶಿರಸಿ1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net