ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣಕ್ಕೆ ಒತ್ತು Budget

ಸಿದ್ದಾಪುರದ ಜನತಾ ಕಾಲನಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು. ಸ್ಥಳೀಯ ಪ್ರಮುಖರು ಹಾಗೂ ಅಧಿಕಾರಿಗಳಿದ್ದರು.
ಸಿದ್ದಾಪುರದ ಜನತಾ ಕಾಲನಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು. ಸ್ಥಳೀಯ ಪ್ರಮುಖರು ಹಾಗೂ ಅಧಿಕಾರಿಗಳಿದ್ದರು.
Published on
ಸಿದ್ದಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ (Budget) ಜನಪರ ಆಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ ಅನ್ನ ನೀಡುವ ರೈತರಿಗೂ ಕೂಡ ಹೆಚ್ಚಿನ ಶಕ್ತಿ ನೀಡಲು ಈ ಬಜೆಟ್ ಪೂರಕವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಮುನ್ನೆಡೆಸಿಕೊಂಡು ಹೋಗುವುದರೊಂದಿಗೆ ರಾಜ್ಯದ ಸಮಗ್ರ ಹಿತದೃಷ್ಟಿ ಕಾಪಾಡುವಂತಹ ಬಜೆಟ್ ಇದಾಗಿದೆ. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ರೂ.ಗಳನ್ನು ನೀಡಿದ್ದಾರೆ.
ವಿರೋಧ ಪಕ್ಷದವರು ಟೀಕೆ ಮಾಡುವುದು ಸಹಜ. ಆದರೆ, ಅವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆ ಇವುಗಳನ್ನು ಅರಿತು ಟೀಕೆ ಮಾಡುವುದು ಉತ್ತಮ.
ಜಿಎಸ್ಟಿ ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಸರಿಯಾಗಿ ಬರುತ್ತಿಲ್ಲ. ಕರ್ನಾಟಕದಿಂದ ಚುನಾಯಿತರಾಗಿ ಹೋದ ಜನಪ್ರತಿನಿಧಿಗಳು ನಮ್ಮ ಪಾಲಿನ ಹಣವನ್ನು ತರಲು ಶ್ರಮಿಸಬೇಕು.
ಈ ಹಣ ಕಾಂಗ್ರೆಸ್ ಸರ್ಕಾರಕ್ಕೆ ನೀಡುವ ಹಣವಲ್ಲ. ಜನಪರ ಕೆಲಸಗಳಿಗೆ ನೀಡುವ ಹಣ.
ಬಿಜೆಪಿ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಹಣ ತರಲು ಶ್ರಮಿಸುವ ಬದಲು ಸರ್ಕಾರವನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ.
ಬಿಜೆಪಿಯವರು ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಪಡೆಯುವ ಸರ್ಕಾರ ಎನ್ನುತ್ತಿದ್ದಾರೆ. ಆದರೆ ಲಂಚ ಪಡೆಯುವಾಗ ಸಿಕ್ಕಿ ಬಿದ್ದವರು ಯಾವ ಪಕ್ಷದವರು ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರರಿಗೆ ನೀಡಬೇಕಾದ ಹಣ ನೀಡಿಲ್ಲ. ಕಾರಣ ಇಂದು ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಮುಖ್ಯಮಂತ್ರಿಗಳು ಹಿಂದಿನ ಸರ್ಕಾರವನ್ನು ದೂಷಿಸದೇ ಗುತ್ತಿಗೆದಾರರ ಬಾಕಿ ಪಾವತಿಸಲು ಕ್ರಮ ಕೈಗೊಂಡಿದ್ದಾರೆ.
ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಹಿಂದೆಂದಿಗಿಂತಲೂ ಉತ್ತಮವಾಗಿ ನಡೆಯುತ್ತಿದೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಮತ್ತು ಪಕ್ಷದ ಪ್ರಮುಖರು ಇದ್ದರು. ಇದಕ್ಕೂ ಪೂರ್ವದಲ್ಲಿ ಶಾಸಕ ಭೀಮಣ್ಣ ನಾಯ್ಕ, ಪಟ್ಟಣ ವ್ಯಾಪ್ತಿಯಲ್ಲಿ 2.80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net