BRC-office-building ಬಿಆರ್‌ಸಿ ಕಚೇರಿ ಕಟ್ಟಡ: ಮಳೆಗಾಲದಲ್ಲಿ ತಪ್ಪದ ಸಮಸ್ಯೆ

ಸೋರುತ್ತಿರುವ ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಸಮನ್ವಯ ಕಚೇರಿ.
ಸೋರುತ್ತಿರುವ ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಸಮನ್ವಯ ಕಚೇರಿ.
Published on

ಪ್ರಮುಖ ಮುಖ್ಯಾಂಶಗಳು

  • ಹಲವೆಡೆ ಸೋರುತ್ತಿದೆ ಮೇಲ್ಛಾವಣಿ
  • ಆತಂಕದ ಮಧ್ಯೆಯೇ ಸಿಬ್ಬಂದಿ ಕಾರ್ಯನಿರ್ವಹಣೆ

ಮುಂಡಗೋಡ: ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶೈಕ್ಷಣಿಕ ಚಟುವಟಿಕೆ, ಮೂಲಸೌಕರ್ಯ ಅಭಿವೃದ್ಧಿ, ದುರಸ್ತಿ ಕಾಮಗಾರಿ, ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಶಾಲೆಗಳ ನಿರ್ವಹಣೆಯ ಮೇಲುಸ್ತುವಾರಿ ವಹಿಸಿರುವ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ (ಬಿಆರ್‌ಸಿ) ಕಟ್ಟಡವೇ ಮಳೆಗಾಲದಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿದೆ.

ಕಚೇರಿಯ ಮೇಲ್ಛಾವಣಿ ಹಲವೆಡೆ ಸೋರುತ್ತಿದ್ದು, ಮಳೆ ನೀರು ನೇರವಾಗಿ ಕಚೇರಿ ಒಳಗೆ ಬೀಳುತ್ತಿದೆ. ಕಂಪ್ಯೂಟರ್‌ಗಳು, ವಿದ್ಯುತ್ ವೈರ್‌ಗಳು ಹಾಗೂ ದಾಖಲೆಗಳಿಗೆ ಹಾನಿಯಾಗದಂತೆ ಸಿಬ್ಬಂದಿ ತಾತ್ಕಾಲಿಕವಾಗಿ ಸಣ್ಣ ಸಣ್ಣ ಬಕೆಟ್‌ಗಳನ್ನು ಇಟ್ಟು ನೀರು ಸಂಗ್ರಹಿಸುತ್ತಿರುವುದು ಮತ್ತು ನೆಲದ ಮೇಲೆ ಗೋಣಿಚೀಲ ಹಾಕಿರುವ ದೃಶ್ಯ ಕಂಡುಬಂದಿದೆ. ಮಳೆ ಹೆಚ್ಚಾದ ಸಮಯದಲ್ಲಿ ಕಚೇರಿ ಸಿಬ್ಬಂದಿ ಆತಂಕದ ನಡುವೆಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಆರ್‌ಸಿ ಕಾರ್ಯಾಲಯವು ತಾಲೂಕಿನ ನೂರಾರು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ದುರಸ್ತಿ ಕಾಮಗಾರಿ, ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು, ವಿವಿಧ ಶೈಕ್ಷಣಿಕ ಯೋಜನೆಗಳ ಅನುಷ್ಠಾನ ಮತ್ತು ಶಾಲೆಗಳ ಆಡಳಿತಾತ್ಮಕ ಕಾರ್ಯಗಳ ಪ್ರಮುಖ ಕೇಂದ್ರವಾಗಿದೆ. ಆದರೆ, ಇದೇ ಕಚೇರಿಯ ಕಟ್ಟಡ ನಿರ್ವಹಣೆ ಕೊರತೆಯಿಂದ ಬಳಲುತ್ತಿರುವುದು ವಿಪರ್ಯಾಸವಾಗಿದೆ ಎಂದು ಸಾರ್ವಜನಿಕರ ಮಾತು.
ಮೇಲ್ಛಾವಣಿಯಿಂದ ನೀರು ಸೋರುವುದರಿಂದ ಕಚೇರಿಯಲ್ಲಿರುವ ಕಂಪ್ಯೂಟರ್‌ಗಳು, ವಿದ್ಯುತ್ ಉಪಕರಣಗಳು ಹಾಗೂ ಪ್ರಮುಖ ದಾಖಲೆಗಳಿಗೆ ಹಾನಿಯಾಗುವ ಅಪಾಯ ಎದುರಾಗಿದೆ. ವಿದ್ಯುತ್ ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸೋರುತ್ತಿರುವುದರಿಂದ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.
ಸಂಬಂಧಪಟ್ಟ ಇಲಾಖೆ ಹಾಗೂ ಮೇಲಧಿಕಾರಿಗಳು ಕೂಡಲೇ ಕಟ್ಟಡವನ್ನು ಪರಿಶೀಲಿಸಿ, ಶಾಶ್ವತ ದುರಸ್ತಿ ಕಾಮಗಾರಿ ಕೈಗೊಂಡು ಸಿಬ್ಬಂದಿಗೆ ಸುರಕ್ಷಿತ ಮತ್ತು ಸುಸಜ್ಜಿತ ಕಾರ್ಯ ವಾತಾವರಣ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಮಾರ್ಗದರ್ಶನ ನೀಡುವ ಬಿಆರ್‌ಸಿ ಕಾರ್ಯಾಲಯದ ಕಟ್ಟಡವೇ ದುರವಸ್ಥೆಯಲ್ಲಿರುವುದು ಇಲಾಖೆಯ ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
6ಎಂಎನ್ ಡಿ3.ಪೋಟೋ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net