

ಕಾರವಾರ: ಬಾಲಿವುಡ್‌ನ ಬಹುನಿರೀಕ್ಷಿತ ಯುದ್ಧ ಆಧಾರಿತ ಚಿತ್ರ 'ಬಾರ್ಡರ್ 2' (Border 2) ತಂಡವು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಏಷ್ಯಾದ ಅತಿದೊಡ್ಡ ನೌಕಾನೆಲೆಯಾದ 'ಐಎನ್‌ಎಸ್ ಕದಂಬ'ಕ್ಕೆ ಭೇಟಿ ನೀಡಿ ಅದ್ದೂರಿ ಕಾರ್ಯಕ್ರಮ ನಡೆಸಿತು. ಚಿತ್ರದ ಪ್ರಚಾರದ ಭಾಗವಾಗಿ ಹಾಗೂ ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚಿತ್ರದ ಮುಖ್ಯ ನಟ ಸನ್ನಿ ಡಿಯೋಲ್, ವರುಣ್ ಧವನ್ ಹಾಗೂ ಚಿತ್ರದ ತಾಂತ್ರಿಕ ತಂಡದ ಸದಸ್ಯರು ನೌಕಾನೆಲೆಯ ಸೈನಿಕರೊಂದಿಗೆ ಸಮಯ ಕಳೆದರು. ಭಾರತೀಯ ನೌಕಾಪಡೆಯ ಶಕ್ತಿ ಮತ್ತು ಶಿಸ್ತನ್ನು ಕಣ್ಣಾರೆ ಕಂಡ ಚಿತ್ರತಂಡ, ದೇಶದ ಕರಾವಳಿ ರಕ್ಷಣೆಯಲ್ಲಿ ತೊಡಗಿರುವ ನೌಕಾಸೇನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ವೇದಿಕೆಯ ಮೇಲೆ ಬಂದ ಸನ್ನಿ ಡಿಯೋಲ್, ತಮ್ಮ ಹಿಂದಿನ 'ಬಾರ್ಡರ್' ಚಿತ್ರದ ಜನಪ್ರಿಯ ಸಂಭಾಷಣೆಗಳನ್ನು ಹೇಳುವ ಮೂಲಕ ಯೋಧರಲ್ಲಿ ಹುರುಪು ತುಂಬಿದರು. ನೌಕಾನೆಲೆಯ ಯೋಧರು ಮತ್ತು ಅವರ ಕುಟುಂಬದವರಿಗಾಗಿ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಚಿತ್ರತಂಡವು ಯೋಧರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿತು.ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಚಿತ್ರತಂಡವು ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಸನ್ನಿ ಡಿಯೋಲ್, "ನೈಜ ಹೀರೊಗಳಾದ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. 'ಬಾರ್ಡರ್ 2' ಕೇವಲ ಸಿನಿಮಾ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ದೇಶಪ್ರೇಮದ ಪ್ರತೀಕ. ಕಾರವಾರದ ಈ ಸುಂದರ ನೌಕಾನೆಲೆಗೆ ಭೇಟಿ ನೀಡಿದ್ದು ಮರೆಯಲಾಗದ ಅನುಭವ," ಎಂದು ಭಾವನಾತ್ಮಕವಾಗಿ ನುಡಿದರು.
ಚಿತ್ರದ ಬಗ್ಗೆ:ಅನುರಾಗ್ ಸಿಂಗ್ ನಿರ್ದೇಶನದ 'ಬಾರ್ಡರ್ ೨' ಚಿತ್ರವು ೧೯೯೭ರಲ್ಲಿ ತೆರೆಕಂಡಿದ್ದ ಸಾರ್ವಕಾಲಿಕ ಹಿಟ್ ಸಿನಿಮಾ 'ಬಾರ್ಡರ್'ನ ಮುಂದುವರಿದ ಭಾಗವಾಗಿದೆ. ಈ ಬಾರಿ ನೌಕಾಪಡೆ ಮತ್ತು ವಾಯುಪಡೆಯ ಸಾಹಸಗಾಥೆಗಳನ್ನು ಸಿನಿಮಾದಲ್ಲಿ ಅಳವಡಿಸಲಾಗಿದೆ ಎಂಬ ಮಾಹಿತಿ ಇದೆ.
ಕಾರ್ಯಕ್ರಮದಲ್ಲಿ ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಗೂ ಸಾವಿರಾರು ಯೋಧರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.