ಭಟ್ಕಳ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಾಟಾಗಿದ್ದ ಖೇಲೋ ಇಂಡಿಯಾ ಅಸ್ಮಿತಾ ಕಿಕ್‌ಬಾಕ್ಸಿಂಗ್ ಲೀಗ್ (ಸೌತ್ ಝೋನ್) ಸ್ಪರ್ಧೆಯಲ್ಲಿ ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್‌ನ ಮಹಿಳಾ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ಕೇರಳ, ತಮಿಳುನಾಡು, ಒಡಿಶಾ, ಪಾಂಡಿಚೇರಿ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಮಹಿಳಾ ಕಿಕ್‌ಬಾಕ್ಸರ್‌ಗಳು ಭಾಗವಹಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಿಗೆ 8,000 ರೂ., ಬೆಳ್ಳಿ ಪದಕ ವಿಜೇತರಿಗೆ 6,000 ರೂ. ಮತ್ತು ಕಂಚಿನ ಪದಕ ವಿಜೇತರಿಗೆ 4,000 ರೂ. ನಗದು ಬಹುಮಾನ ನೀಡಲಾಯಿತು. ಪದಕ ವಿಜೇತರು ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಲೀಗ್‌ಗೆ ಅರ್ಹತೆ ಪಡೆದಿದ್ದಾರೆ.
ಜೂನಿಯರ್ ವಿಭಾಗದ 45 ಕೆಜಿ ಪಾಯಿಂಟ್ ಫೈಟ್‌ನಲ್ಲಿ ಲಿಖಿತಾ ಶಂಕರ ನಾಯ್ಕ ಚಿನ್ನದ ಪದಕ, ಸೀನಿಯರ್ ವಿಭಾಗದ 45 ಕೆಜಿ ಪಾಯಿಂಟ್ ಫೈಟ್‌ನಲ್ಲಿ ಅಖಿಲಾ ಚಂದ್ರಕಾಂತ್ ನಾಯ್ಕ ಬೆಳ್ಳಿ ಪದಕ, ಸಬ್ ಜೂನಿಯರ್ ವಿಭಾಗದ 37 ಕೆಜಿ ಲೈಟ್ ಕಾಂಟ್ಯಾಕ್ಟ್‌ನಲ್ಲಿ ಸಮೀಕ್ಷಾ ಮಾಸ್ತಿ ಗೊಂಡ ಹಾಗೂ ಜೂನಿಯರ್ ವಿಭಾಗದ 42 ಕೆಜಿ ಲೈಟ್ ಕಾಂಟ್ಯಾಕ್ಟ್‌ನಲ್ಲಿ ಮನಾಲಿ ರಾಜು ನಾಯ್ಕ ಕಂಚಿನ ಪದಕ ಪಡೆದಿದ್ದಾರೆ. ಇದಲ್ಲದೆ, ಆಶಿತಾ ಉದಯ ನಾಯ್ಕ ಸಬ್ ಜೂನಿಯರ್ ವಿಭಾಗದ 42 ಕೆಜಿ ಪಾಯಿಂಟ್ ಫೈಟ್‌ನಲ್ಲಿ ಐದನೇ ಸ್ಥಾನ ಪಡೆದು, ಪಾಯಿಂಟ್ ಫೈಟ್ ತಂಡ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ನಾಗಶ್ರೀ ನಾಯ್ಕ ರೆಫರಿಯಾಗಿ ಕಾರ್ಯನಿರ್ವಹಿಸಿದರು. ಉತ್ತರ ಕನ್ನಡ ಜಿಲ್ಲಾ ಕಿಕ್‌ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ, ತರಬೇತುದಾರ ನಾಗಶ್ರೀ ನಾಯ್ಕ, ಕಾನೂನು ಸಲಹೆಗಾರರಾದ ಮನೋಜ ನಾಯ್ಕ, ಉಮೇಶ ಮೊಗೇರ ಸೇರಿದಂತೆ ಸಂಘದ ಪದಾಧಿಕಾರಿಗಳು ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.