ನದಿಗಳನ್ನು ಸಂರಕ್ಷಿಸಲು ಕುಟುಂಬದಿಂದ ಕನಿಷ್ಠ ಇಬ್ಬರು ಪಾಲ್ಗೊಳ್ಳಿ Save river

ಸಿದ್ದಾಪುರ ಟಿಎಸ್‌ಎಸ್ ಸಭಾಭವನದಲ್ಲಿ ಬೇಡ್ತಿ-ಅಘನಾಶಿನಿ ಜಾಗೃತಿ (Save River) ಸಭೆಯಲ್ಲಿ ಗೋಪಾಲಕೃಷ್ಣ ವೈದ್ಯ ಮಾತನಾಡಿದರು.
ಸಿದ್ದಾಪುರ ಟಿಎಸ್‌ಎಸ್ ಸಭಾಭವನದಲ್ಲಿ ಬೇಡ್ತಿ-ಅಘನಾಶಿನಿ ಜಾಗೃತಿ (Save River) ಸಭೆಯಲ್ಲಿ ಗೋಪಾಲಕೃಷ್ಣ ವೈದ್ಯ ಮಾತನಾಡಿದರು.
Published on
ಸಿದ್ದಾಪುರ: ಜ. 11ರಂದು ಶಿರಸಿಯ ಎಂಇಎಸ್ ಕಾಲೇಜು ಮೈದಾನದಲ್ಲಿ ಸಂಘಟಿಸಿರುವ ಬೃಹತ್ ಜನ (Save River) ಸಮಾವೇಶದಲ್ಲಿ ಪ್ರತಿ ಕುಟುಂಬದಿಂದ ಕನಿಷ್ಠ ಇಬ್ಬರಾದರೂ ಪಾಲ್ಗೊಳ್ಳುವಂತೆ ಆಗಬೇಕು ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಕರೆ ನೀಡಿದರು.
ಪಟ್ಟಣದ ಟಿಎಸ್‌ಎಸ್ ಶಾಖೆಯ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವರ್ಣವಲ್ಲಿ ಶ್ರೀ ಗಾಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಗೌರವಾಧ್ಯಕ್ಷತೆಯಲ್ಲಿ, ನೆಲೆಮಾವುಮಠದ ಶ್ರೀ ಮಾಧವಾನಂದಭಾರತೀ ಶ್ರೀಗಳ ಗೌರವ ಮಾರ್ಗದರ್ಶನದಲ್ಲಿ ಸಭೆ ನಡೆಯಲಿದೆ.
ಶ್ರೀ ರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳು, ಜಡೆಮಠದ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಅನೇಕ ಮಠಾಧೀಶರು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಧಾರ್ಮಿಕ ಮುಖಂಡರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ವಿವಿಧ ಸಮಾಜಗಳ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಬೇಡ್ತಿ, ವರದಾ, ಅಘನಾಶಿನಿ, ವೇದಾವತಿ ಯೋಜನೆಗಳ ತೂಗುಕತ್ತಿ ತಲೆಯ ಮೇಲೆ ತೂಗುತ್ತಿದೆ. ಇಂತಹ ಯೋಜನೆಗಳಿಂದ ನಮ್ಮ ಭೂಮಿ ಬರಡಾಗಬಹುದು. ಕುಡಿಯುವ ನೀರಿಗೂ ತತ್ವಾರವಾಗಬಹುದು.
ರಾಜಕಾರಣಿಗಳು ಅವರ ನಿಲುವಿಗೆ ತಕ್ಕುದಾಗಿ ಮಾತನಾಡುತ್ತಾರೆ. ಆದರೆ ಈ ಹೋರಾಟದಲ್ಲಿ ಗುರುಪೀಠಗಳು ಮುಂದಾಗಿರುವಾಗ ಯಾವ ರಾಜಕಾರಣವೂ ತಾಗದು ಎಂದರು.
ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ ಹಾಗೂ ವೆಂಕಟಾಪುರ ನದಿಗಳು ಜಿಲ್ಲೆಯ ಜೀವನಾಡಿಗಳೆನಿಸಿವೆ.
ಪಶ್ಚಿಮಮುಖವಾಗಿ ಹರಿಯುವ ಈ ಐದೂ ನದಿಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಈ ಕುರಿತು ಮುಂಬರುವ ದಿನಗಳಲ್ಲಿ ರಾಜಕೀಯ, ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಬೇಕಿದೆ ಎಂದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರದ ಯೋಜನೆ ಎನ್ನುತ್ತಿದೆ.
ಆದರೆ ರಾಜ್ಯದ ಸಹಕಾರವಿಲ್ಲದೆ ಯೋಜನೆ ಜಾರಿಗೆ ಬರಲು ಸಾಧ್ಯವಿಲ್ಲ. ಬೇಡ್ತಿ-ಅಘನಾಶಿನಿ ಈ ಎರಡೂ ಯೋಜನೆಗಳ ಡಿಪಿಆರ್ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ.
ಈ ಹಿಂದೆ ಈ ಯೋಜನೆಗಳನ್ನು ತಡೆದಿದ್ದಕ್ಕಿಂತ ಹೆಚ್ಚಿನ ಹೋರಾಟದ ಮೂಲಕ ಕೈಗೆತ್ತಿಕೊಳ್ಳಲಿರುವ ಯೋಜನೆ ತಡೆಯಬೇಕು ಎಂದರು.
ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಮಾತನಾಡಿ, ದೈವೀ ಶಕ್ತಿಯೊಂದಿಗೆ ಆಧ್ಯಾತ್ಮ ಪೀಠಗಳ ಶಕ್ತಿಯೂ ಸೇರುವುದರಿಂದ ಈ ಯೋಜನೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದರು.
ಸಿದ್ದಾಪುರ ಮಂಡಲ ಅಧ್ಯಕ್ಷ ಸತೀಶ ಹೆಗಡೆ ಆಲ್ಮನೆ, ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಮಂಡಳಿಯ ಅಧ್ಯಕ್ಷ ಎಸ್.ಆರ್. ಹೆಗಡೆ ಕುಂಬಾರಕುಳಿ, ಜೆ.ಪಿ.ಎನ್. ಹೆಗಡೆ ಹರಗಿ, ಗೋಪಾಲಕೃಷ್ಣ ತಂಗಾರ‌್ಮನೆ, ಕದಂಬ ಸಂಸ್ಥೆಯ ವಿಶ್ವೇಶ್ವರ ಭಟ್ಟ ಮಾತನಾಡಿದರು.
ಟಿಎಸ್‌ಎಸ್‌ನ ನಿರ್ದೇಶಕರುಗಳು, ಪ್ರಮುಖರು ಉಪಸ್ಥಿತರಿದ್ದರು. ಟಿಎಸ್‌ಎಸ್‌ನ ರಾಮಚಂದ್ರ ಭಟ್ಟ ಅಗ್ಗೆರೆ ನಿರ್ವಹಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net