ಯಲ್ಲಾಪುರ: ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡು, ರಾಜ್ಯದ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅರಣ್ಯಭೂಮಿ ಹಕ್ಕು ಹೋರಾಟ ಒಕ್ಕೂಟಗಳ ಸಮಿತಿಯಿಂದ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಅರಣ್ಯ ಹಕ್ಕು ಕಾಯ್ದೆಯು ಅರಣ್ಯವಾಸಿಗಳ ಪರವಾಗಿದ್ದರೂ ರಾಜ್ಯದಲ್ಲಿನ ಬಹುತೇಕ ಅರಣ್ಯ ಅಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆಯ ಕುರಿತು ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ನೀಡಲು ಮೀನಮೇಷ ಮಾಡುತ್ತಿದ್ದಾರೆ. ಜಿಲ್ಲೆಯ ಶಾಸಕರು ಮತ್ತು ನಮ್ಮ ಸಂಘಟನೆಗಳ ಉಪಸ್ಥಿತಿಯಲ್ಲಿ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ಏರ್ಪಡಿಸಿ ಅಧಿಕಾರಿಗಳ ಮಟ್ಟದಲ್ಲಿ ಇರುವ ಗೊಂದಲಗಳನ್ನು ನಿವಾರಿಸುವ ಅಗತ್ಯವಿದೆ. ಶಾಸಕರು ಮಧ್ಯ ಪ್ರವೇಶ ಮಾಡಿ ಜಿಲ್ಲೆಯಲ್ಲಿ,ರಾಜ್ಯದಲ್ಲಿ 2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಲು ಸಾಧ್ಯವಾಗುವಂತೆ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಜಿಲ್ಲೆಯ, ರಾಜ್ಯದ ಅರಣ್ಯ ಭೂಮಿ ಸಾಗುವಳಿದಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿದರು.
ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದ ಕುರಿತಂತೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿದ ಶಾಸಕ ಹೆಬ್ಬಾರ ಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.