ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಬಂದರು Port ವಿರೋಧಿಸಿ ನಡೆಯುತ್ತಿರುವ ಹೋರಾಟ ಮಂಗಳವಾರ ಒಂದು ವರ್ಷವಾದ ಹಿನ್ನೆಲೆ ಅಂಕೋಲಾ ಬಂದ್‌ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ಸಭೆ ನಡೆಸಲಾಯಿತು.
ಸಂಘಟಕ ಸಂಜೀವ ಬಲೇಗಾರ ಮಾತನಾಡಿ, ಕಳೆದ ಒಂದು ವರ್ಷದಿಂದ ವಿವಿಧ ಹಂತದ ಪ್ರತಿಭಟನೆ ಮಾಡುತ್ತ ಬಂದಿದ್ದು, ತಹಸೀಲ್ದಾರ್ ಕಚೇರಿ ಎದುರು ಕಳೆದ 14 ದಿನಗಳಿಂದ ಧರಣಿ ಹಮ್ಮಿಕೊಂಡಿದ್ದೇವು.
ಆದರೆ, ಯಾವ ಜನಪ್ರತಿನಿಧಿಗಳು ನಮಗೆ ಬಂದು ಬೆಂಬಲ ಸೂಚಿಸಲಿಲ್ಲ. ಇಂದು ಇಷ್ಟೊಂದು ಪ್ರಮಾಣದಲ್ಲಿ ಜನರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದರೆ ನಮ್ಮ ಹೋರಾಟದ ಕಿಚ್ಚನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಂ ಗಾಂವ್ಕರ ಮಾತನಾಡಿ, ಈಗಾಗಲೇ ಸಾಕಷ್ಟು ಯೋಜನೆ ಉತ್ತರ ಕನ್ನಡದ ಬಹು ಭಾಗವನ್ನು ಆವರಿಸಿಕೊಂಡಿದೆ.
ಈಗ ಮತ್ತೆ ಖಾಸಗಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಆಗಲು ಬಿಡುವುದಿಲ್ಲ. ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಮನೆ ಮನೆಗೆ ಬರುತ್ತಾರೆ. ಆದರೆ, ಗೆದ್ದ ನಂತರ ನಾಪತ್ತೆಯಾಗುತ್ತಾರೆ. ಅಂಥವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಂತ ಬಿ. ಗೌಡ ಮಾತನಾಡಿ, ನಮ್ಮ ಸಮುದಾಯದ ಸಾಕಷ್ಟು ಫಲವತ್ತಾದ ಭೂಮಿಗಳು ಈ ಯೋಜನೆಗೆ ಭೂಸ್ವಾಧೀನವಾಗಲಿದೆ.
ಹೀಗಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದರು.
ಪ.ಪಂ. ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ, ನಿವೃತ್ತ ಸಾಗರ ವಿಜ್ಞಾನಿ ಡಾ. ವಿ.ಎನ್. ನಾಯಕ ಮಾತನಾಡಿದರು.
ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷ ದಿನೇಶ ಶಿರವಾಳ, ಕರವೇ ಅಧ್ಯಕ್ಷ ಭಾಸ್ಕರ ಪಟಗಾರ ಕುಮಟಾ, ಪ್ರಮುಖರಾದ ರಾಜು ಹರಿಕಂತ್ರ, ಉದಯ ನಾಯಕ, ಪ್ರಮೋದ ಬಾನಾವಳಿಕರ, ವಕೀಲರಾದ ಬಿ.ಡಿ. ನಾಯ್ಕ, ಸೇರಿದಂತೆ 4 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ: ಬೃಹತ್ ಪ್ರಮಾಣದ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಯ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಹೋರಾಟಗಾರ ಮನವಿ ಸ್ವೀಕರಿಸಿ, ಮನವಿಗಳನ್ನು ಸರ್ಕಾರಕ್ಕೆ ಕಳಿಸುವುದಾಗಿ ಹೇಳಿದರು.
ಉಸ್ತುವಾರಿ ಸಚಿವರು ಹೋರಾಟಕ್ಕೆ ಕೈಜೋಡಿಸಲಿ
ಪ್ರತಿಭಟನಾಕಾರರು ಅಣುಕು ಶವದೊಂದಿಗೆ ಮೆರವಣಿಗೆ ನಡೆಸಿದರು. ಮೀನುಗಾರ ಸಮಾಜದ ಹೆಸರಿನಲ್ಲಿ ಮಂತ್ರಿ ಸ್ಥಾನ ಪಡೆದ ಮಂಕಾಳ ವೈದ್ಯ ಇದುವರೆಗೂ ನಮ್ಮ ಸಮಸ್ಯೆಯನ್ನು ಕೇಳಿಲ್ಲ. ಬದಲಾಗಿ ಈ ಯೋಜನೆಯ ಬಗ್ಗೆ ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿದ್ದಾರೆ.
ಗುತ್ತಿಗೆ ಕಂಪನಿಯವರು ಯರ‌್ಯಾರ ಖಾತೆಗೆ ಎಷ್ಟೆಷ್ಟು ಜಮಾ ಮಾಡಿದ್ದರೋ ಗೊತ್ತಿಲ್ಲ. ಸಚಿವರಿಗೆ ಹಣದ ಅವಶ್ಯಕತೆ ಇದ್ದರೆ ಹಣ ಸೇರಿಸಿ ಹಾಗೂ ಇತರರಿಂದ ಭಿಕ್ಷೆ ಬೇಡಿ ನೀಡುತ್ತೇವೆ. ಆದರೆ, ಒಮ್ಮೆಯಾದರೂ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.