

ಗೋಕರ್ಣ: ಇಲ್ಲಿನ ಪುಣ್ಯಾಶ್ರಮದಲ್ಲಿ ಅತ್ಯಂತ ಅಪರೂಪ ಮತ್ತು ಅತಿ ಮೌಲಿಕವಾದ ಗೋಶಾಲೆಯೊಂದು ಭೇಟಿ ನೀಡುವ ಶ್ರದ್ಧಾವಂತರಿಗೆ ಆಕರ್ಷಣೆಯ ಕೇಂದ್ರವಾಗಿದೆ.
ಕಳೆದ ಎರಡು ವರ್ಷಗಳಿಂದ ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಅವರು ತಮ್ಮ ಪುಣ್ಯಾಶ್ರಮದ ಪುಣ್ಯಕೋಟಿ ಗೋಶಾಲೆಯಲ್ಲಿ ದೇಶದಲ್ಲಿ ಅಳಿವಿನಂಚಿನಲ್ಲಿರುವ ಅತ್ಯಂತ ಅಪರೂಪದ ಮತ್ತು ಬಹು ಪವಿತ್ರ ಎನ್ನಲಾದ ಗರಿಷ್ಠ ಬೆಲೆ ಬಾಳುವ ನಲವತ್ತಕ್ಕೂ ಅಧಿಕ ದೇಸಿ ಗೋವುಗಳನ್ನು ಮಾತ್ರ ಸಂರಕ್ಷಿಸುತ್ತ ಬಂದಿರುವುದು ವಿಶೇಷವಾಗಿದೆ!.
ಇಂತಹ ಗೋಶಾಲೆಗೆ ಇತ್ತೀಚೆ ಇಂದು ಮರೆಯಾಗುತ್ತಿರುವ ಪುಂಗನೂರು ಗೋ ತಳಿಯ ಐದು ಗೋವುಗಳು ಬಂದು ಸೇರಿವೆ.
ಅಮೃತ ಭರಿತ ಹಾಲು: ಆಂಧ್ರ ಪ್ರದೇಶದ ಪುಂಗನೂರು ಪ್ರದೇಶದ ಈ ಗೋವುಗಳನ್ನು ವೇದ ಪರಂಪರೆ ಅತ್ಯಂತ ಪವಿತ್ರತಮ ಎಂದು ಗೌರವಿಸಿದೆ. ಪೂರ್ಣ ಪ್ರಮಾಣದಲ್ಲಿ ಪೌಷ್ಟಿಕ ಅಂಶವಿರುವ ಇದರ ಹಾಲು ಎ 2 ಗುಂಪಿಗೆ ಸೇರಿ ಅಮೃತ ಸದೃಶ ಕ್ಷೀರವಾಗಿದೆ.
ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿರುವ ಪುಂಗನೂರು ಗೋ ಕ್ಷೀರದಿಂದ ಸಿದ್ಧ ಪಡಿಸಲಾದ ತುಪ್ಪಕ್ಕೆ ಉಳಿದೆಲ್ಲ ತುಪ್ಪಗಳಿಗಿಂತ ಹೆಚ್ಚಿನ ಬೆಲೆಯಿದೆ. ಪ್ರಾತಃ ಕಾಲದಲ್ಲಿ ಎದ್ದೊಡನೆ ಮೊದಲು ಇದರ ದರ್ಶನ ಮಾಡುವುದು ಪರಮ ಶುಭದಾಯಕ ಎಂದು ಶಾಸ್ತ್ರಗಳು ಸಾರಿವೆ.
ಅಳಿವಿನತ್ತ ಪಾವಿತ್ರ್ಯ: ನಮ್ಮ ಧರ್ಮ ಅತ್ಯಂತ ಪಾವನಮಯಿ ಎಂದು ಪೂಜಿಸಿದ ಈ ಗೋವಿನ ವಂಶ ಇಂದು ಅಳಿವಿನ ಅಂಚಿನಲ್ಲಿವೆ. ಹೀಗಾಗಿ ಗೋಶಾಲೆಗಳ ಮೂಲಕ ಇದರ ಸಂರಕ್ಷಣೆ ಮತ್ತು ಸಂಗೋಪನೆಯ ಸಾಹಸ ಕೈಗೊಳ್ಳಲಾಗುತ್ತಿದೆ. ಭಾರತೀಯ ಪ್ರಾಚೀನ ವೇದ ಪರಂಪರೆಗೆ ಸೇರಿದ ಈ ಗಿಡ್ಡ ತಳಿಯ ಗೋವುಗಳು ಕೇವಲ ಮೂರರಿಂದ ನಾಲ್ಕು ಅಡಿ ಎತ್ತರ ಮತ್ತು 150ರಿಂದ 200 ಕಿಲೊ ಭಾರವಿರುತ್ತವೆ. ಎಂತಹ ವಾತಾವರಣಕ್ಕೆ ಕೂಡ ಹೊಂದಿಕೊಂಡು ಕಡಿಮೆ ಮೇವಿನ ಅವಶ್ಯತೆಯಿರುವ ಈ ಗೋವುಗಳಿಗೆ ರೋಗ ಬರುವ ಸಾಧ್ಯತೆ ಬಹು ಕಡಿಮೆ ಎಂದು ದಾಖಲೆಗಳು ಹೇಳುತ್ತವೆ. ಸಾರ್ವಜನಿಕವಾಗಿ ಇಂದು ದರ್ಶನ ದುರ್ಲಭ ಮತ್ತು ಸಂಗೋಪನೆ ಕಷ್ಟಕರವಾದ ಇಂತಹ ಅಚ್ಚ ಭಾರತದ ಅನೇಕ ದೇಸಿ ಗೋವುಗಳು ಇಲ್ಲಿನ ಪುಣ್ಯಾಶ್ರಮದಲ್ಲಿ ದರ್ಶನ ಭಾಗ್ಯಕ್ಕೆ ಕಾರಣವಾಗಿರುವುದು ಗೋಕರ್ಣ ಕ್ಷೇತ್ರದಲ್ಲಿ ಸನಾತನ ಗೋ ಪರಂಪರೆಗಳ ಪುನರುಜ್ಜೀವನಕ್ಕೊಂದು ನೂತನ ಮಾದರಿಯಾಗಿದೆ.