ನೌಕಾ ಶಸ್ತ್ರಾಗಾರದ ನೇಮಕಾತಿಯಲ್ಲಿ ಅವ್ಯವಹಾರ ಆರೋಪ

ಒಂದೇ ಪಿನ್‌ ಕೋಡ್‌ ಹೊಂದಿರುವ 24 ಜನ ನೇಮಕಾತಿ, ತನಿಖೆಗೆ ಸ್ಥಳೀಯ ನಿರಾಶ್ರಿತರ ಸಂಘಟನೆಯಿಂದ ಒತ್ತಾಯ
Navy
ಸುನೀಲ ನಾಯ್ಕ
Published on: 

ಕಾರವಾರ: ಕದಂಬ ನೌಕಾನೆಲೆಯ ವಿವಿಧ ವಿಭಾಗಗಳ ಡಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯ ನಿರಾಶ್ರಿತ ಕುಟುಂಬಗಳಿಗೆ ಶೇ.70 ರಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂದು ಬೇಲೆಕೇರಿಯ ಹಟ್ಟಿಕೇಶ್ವರ ಸ್ಥಳೀಯ ಹಾಗೂ ಸೀಬರ್ಡ್ ನಿರಾಶ್ರಿತರ, ಕೂಲಿ ಕಾರ್ಮಿಕರ ಅಸಂಘಟಿತ ಸಂಘದ ಅಧ್ಯಕ್ಷ ಸುನೀಲ ನಾಯ್ಕ ಹೊನ್ನಿಕೇರಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೀಬರ್ಡ್ ನೌಕಾ ಯೋಜನೆಯಾಗಿ ಸಾವಿರಾರು ಕುಟುಂಬಗಳು ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಿವೆ. ಆದರೆ, ಎಲ್ಲ ಕುಟುಂಬಗಳಿಗೆ ಉದ್ಯೋಗ ಸಿಕ್ಕಿಲ್ಲ. ನೌಕಾ ಯೋಜನೆ ಪ್ರಾರಂಭದಲ್ಲಿ ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರಗಳು ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕಿತ್ತು ಎಂದು ಅಽಕಾರಿಗಳು ಹೇಳುತ್ತಾರೆ. ಈಗಲೂ ಅವಕಾಶವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಪ್ರಯತ್ನ ಮಾಡಿದಲ್ಲಿ ಸ್ಥಳೀಯರಿಗೆ ಅಕುಶಲ ಹುದ್ದೆಗಳನ್ನು ಮೀಸಲಿಡಲು ಸಾಧ್ಯ. ಸಿ ದರ್ಜೆಯ ಹುದ್ದೆಗಳಲ್ಲಿ ಶೇ. 30 ರಷ್ಟು ಮೀಸಲಾತಿ ನೀಡಲು ಸಾಧ್ಯವಿದೆ. ಈ ಬಗ್ಗೆ ಪ್ರಯತ್ನ ನಡೆಸಬೇಕು ಎಂದರು.

ಅವ್ಯವಹಾರ:

ಈಗ ನೌಕಾನೆಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಹೊರ ರಾಜ್ಯದವರನ್ನು ತಂದು ತುಂಬಲಾಗುತ್ತಿದೆ ಎಂದು ಆರೋಪಿಸಿದರು. ನೌಕಾ ಶಸ್ತ್ರಾಗಾರದಲ್ಲಿ 256 ಹುದ್ದೆಗಳಿಗೆ ಇತ್ತೀಚೆಗೆ ನೇಮಕಾತಿಯಾಗಿದ್ದು, ಅದರಲ್ಲಿ ಜಾರ್ಖಂಡ್ ರಾಜ್ಯದ ಒಂದೇ ಊರಿನ ಪಿನ್‌ಕೋಡ್ ಹೊಂದಿರುವ 25 ಜನರಿಗೆ ಉದ್ಯೋಗ ನೀಡಲಾಗಿದೆ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಮಿಲಿಟರಿ ಇಂಜಿನಿಯರಿಂಗ್ ಸರ್ವೀಸ್ (ಎಂಇಎಸ್) ವಿಭಾಗದಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸರ್ಕಾರದಿಂದ 22 ಸಾವಿರ ರೂ. ವೇತನ ಪಾವತಿಸಲಾಗುತ್ತದೆ. ಆದರೆ, ಗುತ್ತಿಗೆದಾರ ಕೇವಲ 12 ಸಾವಿರ ರೂ.ಗಳನ್ನು ಉದ್ಯೋಗಿಗಳಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಕೇಳಿದಲ್ಲಿ ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಾರೆ ಎಂದು ಆರೊಪಿಸಿದರು.

ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಜಿಲ್ಲಾಽಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ನಂತರ ತೀವ್ರ ಪ್ರತಿಭಟನೆ ನಡೆಸಿ, ನೌಕಾ ವಿಮಾನ ನಿಲ್ದಾಣ ಕಾಮಗಾರಿಗೆ ತಡೆಯೊಡ್ಡಲಾಗುವುದು ಎಂದು ಎಚ್ಚರಿಸಿದರು. ಸಂಘಟನೆಯ ಸದಸ್ಯರಾದ ದಿಗಂಬರ ಆರ್.ಗೌಡ, ಸುಬ್ರಹ್ಮಣ್ಯ ಗೌಡ, ಪ್ರಶಾಂತ ನಾಯ್ಕ, ಗುರು ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net