ಅಂಕೋಲಾ: ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಟ್ಯಾಂಕರ್ ಸ್ಫೋಟಿಸಿ ಬೆಂಕಿ ಹತ್ತಿ ಉರಿದಿದ್ದ ಘಟನೆ ತಾಲೂಕಿನ ಕಂಚಿನಬಾಗಿಲ ಬಳಿ ಗುರುವಾರ ಸಂಭವಿಸಿದೆ.
ಬಾಗಲಕೋಟೆ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ ಲಾರಿ ಎಂದು ತಿಳಿದು ಬಂದಿದೆ. ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಲಾರಿಯ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಸಾಗಿಸಲಾಗಿದೆ.
ಅರ್ಧಗಂಟೆಗೂ ಹೆಚ್ಚು ಕಾಲ ಎಥೆನಾಲ್ ತುಂಬಿದ ಲಾರಿ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದರು. ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿಯ ಅಂಕೋಲಾ ಯಲ್ಲಾಪುರ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಅರಣ್ಯ ಪ್ರದೇಶಕ್ಕೂ ಬೆಂಕಿ ಆವರಿಸಿದೆ.
ಡಿವೈಎಸ್ಪಿ ಗಿರೀಶ ಎಸ್.ವಿ., ತಹಸೀಲ್ದಾರ್ ನಿಶ್ಚಲ್ ನರೋನ, ತಾಪಂ ಇಒ ರಾಮು ಗುನಗಿ, ಪಿಎಸ್‌ಐ ಗುರುನಾಥ ಹಾದಿಮನಿ, ಲಲಿತಾ ರಜಪೂತ್, ಎಎಸ್‌ಐ ಜ್ಞಾನೇಶ್ವರ ಹರಿಕಂತ್ರ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.