ನಿತ್ಯಯಜ್ಞ ಮತ್ತು ಆತ್ಮಯಾಜಿ: ವೇದ, ಉಪನಿಷತ್, ಆಚಾರ್ಯ ಬೋಧಾಯನರು, ಸ್ವಯಂ ಶ್ರೀ ಶಂಕರಾಚಾರ್ಯ ಗುರುವರ್ಯರು ಸೇರಿದಂತೆ ಸಮಸ್ತ ಭಾರತೀಯ ಸನಾತನ ಸಂಸ್ಕೃತಿ ಭೋಜನಕ್ಕೆ ನಿತ್ಯಯಜ್ಞ, ಆತ್ಮಯಜ್ಞ ಎಂಬ ದೈವಿಕ ಮಹತ್ವ ನೀಡಿದೆ. ಈ ಯಜ್ಞದಲ್ಲಿ ಶರೀರ ಯಜ್ಞಶಾಲೆ. ದೇಹದ ಒಳಗಿನ ಜಠರಾಗ್ನಿಯೇ ಸಾಕ್ಷಾತ್ ಅಗ್ನಿಸ್ವರೂಪ. ಭೋಜನವೇ ಹವಿಸ್ಸು ಎನ್ನಲಾಗಿದೆ. ಶಾಸ್ತ್ರಕಾರರಾದ ಬೋಧಾಯನರ ಪ್ರಕಾರ ತನ್ನೊಳಗಿನ ಅಗ್ನಿಯಲ್ಲಿ ನಿತ್ಯ ಭೋಜನ ಎಂಬ ಯಜ್ಞ ಮಾಡುವವನನ್ನು ಅವರು ‘ಆತ್ಮಯಾಜಿ’ ಎಂದಿದ್ದಾರೆ. ಈ ಆತ್ಮಯಾಜಿ ಕೈಗೊಳ್ಳುವ ವಿಧಿವತ್ತಾದ ಭೋಜನ ಎಂಬ ಯಜ್ಞ ಎಲ್ಲ ಯಜ್ಞಗಳಲ್ಲಿ ಶ್ರೇಷ್ಠವಾದುದು. ದೇವತಾ ಸ್ತುತಿಗೈದು ಊಟವನ್ನು ದೇವತೆಗಳಿಗೆ ಸಮರ್ಪಿಸಿ ಉಣ್ಣುವುದರಿಂದ ‘ತ್ರಯಃ ತ್ರಿಂಶತ್ ಕೋಟಿ ದೇವಾಃ ತೃಪ್ತಂತಿ’. ಇಂತಹ ವಿಧಿ ಪ್ರಯುಕ್ತ ಭೋಜನಯಜ್ಞ 33 ಕೋಟಿ ದೇವಾನುದೇವತೆಗಳನ್ನು ತೃಪ್ತಿ ಪಡಿಸುತ್ತದೆ ಎನ್ನುವುದು ಆಚಾರ್ಯ ಶ್ರೇಷ್ಠರ ಉಲ್ಲೇಖವಾಗಿದೆ. ಇಂತಹ ಭೋಜನದಿಂದ ನಮ್ಮ ಅರಿವಿಗೆ ಬಾರದೆ ಕೃತಪಾಪ ಜಠರಾಗ್ನಿಯಲ್ಲಿ ಉರಿದು ನಾಶವಾಗುವ ಫಲ ಲಭಿಸುತ್ತದೆ. ಇದನ್ನು ಬಿಟ್ಟು ನಿರ್ವಿಧಿದ್ವಾರಾ ಸುಮ್ಮನೆ ಉಣ್ಣುವವನನ್ನು ಭೋಜನವೇ ಪಾಪಿಯಾಗಿಸುತ್ತದೆ.