ಬಿಜೆಪಿ ಮುಖಂಡನ ಹತ್ಯೆಗೆ ಯತ್ನಿಸಿದ 6 ಅಪರಾಧಿಗಳಿಗೆ 10 ವರ್ಷ ಜೈಲು

ಸಾಂದಭಿಕ ಚಿತ್ರ
ಸಾಂದಭಿಕ ಚಿತ್ರ
Published on
ಶಿರಸಿ: ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮತ್ತು ಕೊಲೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಅಪರಾಧಿಗಳಿಗೆ ಶಿರಸಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯ 10 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.
ನಗರದ ಕಸ್ತೂರಬಾನಗರದ ಮೊಹಮ್ಮದ್ ಫಾರೂಕ್ ಮೊಹಮ್ಮದ್ ಶಫಿವುಲ್ಲಾ ಪಟೇಲ್, ಮೊಹಮ್ಮದ್ ಸಲೀಂ ಸಾಗರ ಭಾಷಾ ಅಬ್ದುಲ್ ರಹೀಂ, ಮೊಹಮ್ಮದ್ ಆರೀಫ್ ದವಲ್ ಸಾಬ್ ಕರ್ಜಗಿ, ನಿಸಾರ ಅಹಮದ್ ಕಾಸಿಂಸಾಬ್ ಶೇಕ್, ಮೌಸೀನ್ ಅಬ್ದುಲ್ ಶುಕೂರ್ ಹೊನ್ನಾವರ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಈ ಎಲ್ಲ ಅಪರಾಧಿಗಳು ಎಸ್ ಡಿ ಪಿ ಐ ಸಂಘಟೆಗೆ ಸೇರಿದವರಾಗಿದ್ದಾರೆ.
2019ರ ಏ.23ರಂದು ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಮುಖ್ಯಸ್ಥರಾದ ಅನೀಸ್ ತಹಸೀಲ್ದಾರ್ ಅವರ ಹತ್ಯೆಗೆ ಯತ್ನಿಸಿದ್ದರು. ಅಂದು ರಾತ್ರಿ 10.30ರ ವೇಳೆ ಅನೀಸ್ ತಹಸೀಲ್ದಾರ್ ಕಸ್ತೂರಬಾ ನಗರದಲ್ಲಿ ಮಿತ್ರನಿಗೆ ಕಾಯುತ್ತ ಬೈಕ್ ಮೇಲೆ ಕುಳಿತುಕೊಂಡಿದ್ದ ವೇಳೆ ಹಿಂದಿನಿಂದ ಕಪ್ಪು ಕಾರಿನಲ್ಲಿ ದೀಪ ಆರಿಸಿಕೊಂಡು ಬಂದ ಆರೋಪಿಗಳು ಬೈಕಿಗೆ ಢಿಕ್ಕಿ ಹೊಡೆಸಿದ್ದರು. ರಸ್ತೆಯಲ್ಲಿ ಬಿದ್ದ ಅನೀಸ್ ತಹಸೀಲ್ದಾರ್ ಅವರಿಗೆ ಬಳಿಕ ಚಾಕು, ಚೂರಿ, ಸಲಾಕೆಯಿಂದ್ದಾರೋಪಿಗಳು ಹಲ್ಲೆ ನಡೆಸಿದ್ದರು. ಗಲಾಟೆ ನಡೆಯುತ್ತಿರುವುದರಿಂದ ಸ್ಥಳೀಯರು ಸೇರುತ್ತಿದ್ದಂತೆಯೇ ಈ ಆರೋಪಿತರು ಕಾರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು.
ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ತಾವು ಧರಿಸಿದ್ದ ರಕ್ತ ತಾಗಿದ ಅಂಗಿಯನ್ನು ಸುಟ್ಟು ಹಾಕಿ, ಮೊಬೈಲ್‌ಗಳನ್ನು ನದಿಗೆ ಎಸೆದಿದ್ದರು. ತೀವ್ರ ಗಾಯಗೊಂಡಿದ್ದ ಅನೀಸ್ ತಹಸೀಲ್ದಾರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಕುರಿತಂತೆ ನಗರದ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತಲ್ಲದೇ, ಪೊಲೀಸ್ ಉಪ ನಿರೀಕ್ಷಿಕ ಶಶಿಕುಮಾರ ಸಿ. ಆರ್. ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗಿಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರಾದ ಕಿರಣ ಕಿಣಿ, ಆರೋಪಿಗಳಿಗೆ 10 ವರ್ಷ ಕಾರಾಗೃಹ ಶಿಕ್ಷೆಯ ಜೊತೆ ತಲಾ 18 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡ ಅನೀಸ್ ತಹಸೀಲ್ದಾರ್ ಅವರಿಗೆ ಪ್ರತಿ ಆರೋಪಿಯೂ ತಲಾ 10 ಸಾವಿರ ರೂ. ಪರಿಹಾರದಂತೆ ಒಟ್ಟೂ 60 ಸಾವಿರ ರೂ. ನೀಡುವಂತೆ ಆದೇಶಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net