ಐದು ನಿರ್ದೇಶಕರ ಸ್ಥಾನಗಳಿಗೆ 207 ಆಕಾಂಕ್ಷಿಗಳು

ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ಧರ್ಮದರ್ಶಿಗಳಾಗಲು ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ದೇವಾಲಯದ ಆವರಣದಲ್ಲಿ ಪ್ರಕಟಿಸಿರುವುದು.
ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ಧರ್ಮದರ್ಶಿಗಳಾಗಲು ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ದೇವಾಲಯದ ಆವರಣದಲ್ಲಿ ಪ್ರಕಟಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಾರಿಕಾಂಬಾ ದೇವಾಲಯದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ
  • ಉಮೇದುವಾರಿಕೆ ಸಲ್ಲಿಸಿದವರ ಪಟ್ಟಿ ಪ್ರಕಟ
ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಾಲಯದ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. 5 ನಿರ್ದೇಶಕ ಸ್ಥಾನಕ್ಕೆ ಒಟ್ಟೂ 207 ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹೌದು, ಶಿರಸಿ ಮಾರಿಕಾಂಬೆ ನಾಡಿನ ಶಕ್ತಿ ದೇವತೆಗಳಲ್ಲಿ ಒಬ್ಬಳು. ದೇವಿಯ ದರ್ಶನಕ್ಕೆ ದೇವಾಲಯದಲ್ಲಿ ಸರತಿ ಸಾಲಿರುತ್ತದೆ. ಜಾತ್ರಾ ದಿನಗಳಲ್ಲಂತೂ ಗದ್ದುಗೆಯಲ್ಲಿ ಕುಳಿತ ಮಾರಿಕಾಂಬೆಯ ದರ್ಶನ ಪಡೆಯಲು ನೂಕು ನುಗ್ಗಲು, ನಾಲ್ಕಾರು ತಾಸುಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಅಂತಹದ್ದರಲ್ಲಿ ದೇವಸ್ಥಾನದ ಧರ್ಮದರ್ಶಿಯಾಗಿ ಮಾರಿಕಾಂಬೆಯ ಸೇವೆ ಮಾಡಲು ಭಕ್ತರಲ್ಲಿ ಆಸಕ್ತಿಯೂ ಸಹಜವಾಗಿ ಇಮ್ಮಡಿಸಿದೆ. ಐದು ವರ್ಷಗಳ ಅವಧಿಯ ಧರ್ಮದರ್ಶಿ ಸ್ಥಾನಕ್ಕೆ ಹಿಂದಿನ ಅವಧಿಗೆ ನಿವೃತ್ತ ವಲಯಾರಣ್ಯಾಧಿಕಾರಿ ರವೀಂದ್ರ ನಾಯ್ಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಿಎಸ್ಸೆನ್ನೆಲ್ ನಿವೃತ್ತ ಉದ್ಯೋಗಿ ಸುಧೇಶ ಜೋಗಳೇಕರ್ ಉಪಾಧ್ಯಕ್ಷರಾಗಿದ್ದರು. ಅದರಂತೆ ವಿವಿಧ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಸುಧೀರ ಹಂದ್ರಾಳ, ಶಿವಾನಂದ ಶಿವನಂಚಿ ಹಾಗೂ ವತ್ಸಲಾ ಹೆಗಡೆ ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಮೂರು ಜಾತ್ರೆಗಳು ನಡೆದು ಉತ್ತಮ ಕಾರ್ಯ ಚಟುವಟಿಕೆಗೆ ಈ ತಂಡ ಪ್ರಶಂಸೆ ಪಡೆದಿತ್ತು. ಈಗ ಅವರ ಅವಧಿ ಮುಕ್ತಾಯಗೊಂಡಿದ್ದು, ಹೊಸ ಆಡಳಿತ ಮಂಡಳಿಗೆ ಕಳೆದ ತಿಂಗಳು ಅರ್ಜಿ ಕರೆಯಲಾಗಿತ್ತು.
ಆಯ್ಕೆ ಹೇಗೆ?
ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳನ್ನು ಜಿಲ್ಲಾ ನ್ಯಾಯಾಧೀಶರೇ ಆಯ್ಕೆ ಮಾಡುತ್ತಾರೆ. ದೇವಸ್ಥಾನದ ಧರ್ಮದರ್ಶಿಗಳಾಗಲು ಶಿರಸಿ ಸೇರಿದಂತೆ ನಿಗದಿಗೊಳಿಸಲಾದ ಶಿರಸಿ ಸುತ್ತಮುತ್ತಲಿನ 46 ಗ್ರಾಮದ ಜನತೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸಮಾಜಕ್ಕೆ ಕೊಡುಗೆ ನೀಡಿದವರು, ಸಮಾಜದ ನಡುವೆ ಇದ್ದು ಜನೋಪಯೋಗಿ ಕಾರ್ಯ ನಡೆಸುವವರು ಧರ್ಮದರ್ಶಿ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಾಗಿರುತ್ತಾರೆ. ಕಳೆದ ತಿಂಗಳು ಮಾರಿಕಾಂಬಾ ದೇವಾಲಯದಿಂದ ಧರ್ಮದರ್ಶಿ ಸ್ಥಾನಕ್ಕೆ ಈ ಗ್ರಾಮಗಳ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟೂ 271 ಆಕಾಂಕ್ಷಿತರು ದೇವಾಲಯದಿಂದ ಧರ್ಮದರ್ಶಿ ಸ್ಥಾನದ ಅರ್ಜಿ ಪಡೆದುಕೊಂಡು ಹೋಗಿದ್ದಾರೆ. ಈ ಪೈಕಿ 207 ಜನ ಅರ್ಜಿ ತುಂಬಿ ದೇವಾಲಯಕ್ಕೆ ಸಲ್ಲಿಸಿ ತಮ್ಮ ಆಸಕ್ತಿ ತೋರಿದ್ದಾರೆ. ಆಕಾಂಕ್ಷಿತರ ಪಟ್ಟಿಯನ್ನು ಈಗಾಗಲೇ ದೇವಾಲಯದ ಸಭಾಂಗಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಅರ್ಜಿ ವಾಪಸಾತಿಗೆ ಏ. 26 ಕೊನೇ ದಿನವಾಗಿದೆ. ಆ ಬಳಿಕ ಅರ್ಜಿ ಸಲ್ಲಿಸಿದವರ ಬಗ್ಗೆ ತಕರಾರುಗಳಿದ್ದರೆ ಅದಕ್ಕೆ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ಮೇ 1ರಂದು ಸಲ್ಲಿಕೆಯಾದ ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ನಡೆದು ಮೇ 2ರಂದು ಸಮರ್ಪಕವಾಗಿರುವ ಅರ್ಜಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ.
ಧರ್ಮದರ್ಶಿಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ನ್ಯಾಯಾಧೀಶರು ನಡೆಸುತ್ತಾರೆ. ಆ ಬಳಿಕ ಆಯ್ಕೆಯಾದ 5 ಯೋಗ್ಯ ವ್ಯಕ್ತಿಗಳನ್ನು ನ್ಯಾಯಾಲಯವೇ ಪ್ರಕಟಿಸಲಿದ್ದು, ಅಧ್ಯಕ್ಷರ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಂದಿನ ಹಂತಗಳಲ್ಲಿ ನಡೆಯಲಿವೆ.
ಜವಾಬ್ದಾರಿ ಏನು?
ಮಾರಿಕಾಂಬಾ ದೇವಸ್ಥಾನದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡುವಿಕೆ ಆಯ್ಕೆಯಾದ ಧರ್ಮದರ್ಶಿಗಳ ಮೊದಲ ಆದ್ಯತೆ ಆಗಿರುತ್ತದೆ. ಸಾರ್ವಜನಿಕರು, ದೇವಾಲಯದ ಬಾಬುದಾರರೊಂದಿಗೆ ಚರ್ಚಿಸಿ ಏನೇನೆಲ್ಲ ಆಗಬೇಕು ಎಂಬುದನ್ನು ಧರ್ಮದರ್ಶಿಗಳು ಪಟ್ಟಿ ಸಿದ್ಧಪಡಿಸಿ ಅದಕ್ಕೆ ನ್ಯಾಯಾಧೀಶರಿಂದ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ಆದ್ಯತೆ ಮೇಲೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಧರ್ಮದರ್ಶಿಗಳ ಜವಾಬ್ದಾರಿ. ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ವೇಳೆ ಧರ್ಮದರ್ಶಿಗಳು ಗುರುತರ ಜವಾಬ್ದಾರಿ ವಹಿಸಬೇಕಾಗಿರುತ್ತದೆ.
ಪ್ರಸಕ್ತ ಈಗ ನಗರದ ಪ್ರಮುಖ ವರ್ತಕರು, ಉದ್ಯಮಿಗಳು, ಕೃಷಿಕರು, ನಿವೃತ್ತ ಅಧಿಕಾರಿಗಳು ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶದಿಂದಲೂ ಆಸಕ್ತರು ಅರ್ಜಿ ಸಲ್ಲಿಸಿದ್ದಾರೆ. ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳಾಗಿ ಈ 207 ಜನರಲ್ಲಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕೌತುಕ ಈಗ ಸಾರ್ವಜನಿಕರಲ್ಲಿ ಮೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net