ಕರಾವಳಿ ಕಾನೂನು ಪಾಲನೆಗೆ ಉತ್ತರದ ಪೊಲೀಸರು; ನೇಮಕಾತಿಯಲ್ಲಿ ಸ್ಥಳೀಯರಿಗೆ ಹಿನ್ನಡೆ

mng- july 29- Police constable
Published on

ಪ್ರಕಾಶ್ ಮಂಜೇಶ್ವರ, ಮಂಗಳೂರು

ಪ್ರಸ್ತುತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಯಾವುದೇ ಪೊಲೀಸ್ ಠಾಣೆಗೆ ಹೋದರೆ ಸ್ಥಳೀಯರಿಗೆ ಈಗ ಒಂದು ಅಪರಿಚಿತ ವಾತಾವರಣ ಕಂಡುಬರುತ್ತದೆ. ಏಕೆಂದರೆ ಜಿಲ್ಲೆಯಲ್ಲಿರುವ ಕಾನ್‌ಸ್ಟೆಬಲ್‌ಗಳ ಪೈಕಿ ಶೇ.70ರಷ್ಟು ಮಂದಿ ರಾಜ್ಯದ ಉತ್ತರ ಮತ್ತು ದಕ್ಷಿಣ ವಲಯದವರು. ಇದರಲ್ಲೂ ಉತ್ತರ ಕರ್ನಾಟಕದವರದೇ ಪ್ರಾಬಲ್ಯ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಪೊಲೀಸ್ ವ್ಯವಸ್ಥೆಯಲ್ಲಿ ಸೈನ್ಯದ ಕಾಲಾಳುಗಳಂತೆ ದೊಡ್ಡ ಶಕ್ತಿಯಾಗಿರುವವರು, ಸಾರ್ವಜನಿಕರ ಜತೆ ನಿತ್ಯ ನೇರ ಸಂಪರ್ಕದಲ್ಲಿರುವವರು ಪೊಲೀಸ್ ಕಾನ್‌ಸ್ಟೆಬಲ್‌ಗಳು. ಉತ್ತರ ಕರ್ನಾಟಕ ಮತ್ತು ಕರಾವಳಿಯ ಜನರ ಭಾಷೆ, ಸಾಂಸ್ಕೃತಿಕ ವಿಚಾರಗಳಲ್ಲಿ ಭಿನ್ನತೆಯಿದೆ. ಈ ಕಾರಣಕ್ಕಾಗಿಯೇ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಕೆಲ ಬಾರಿ ಸಣ್ಣಪುಟ್ಟ ಸಂಘರ್ಷಗಳು ನಡೆಯುವುದುಂಟು.

ಕೆಲ ಜಟಿಲ ಅಪರಾಧ ಪ್ರಕರಣಗಳನ್ನು ಭೇದಿಸಲು, ಕೋಮು ಸಂಘರ್ಷದಂತಹ ಸೂಕ್ಷ್ಮ ಸಂಗತಿಗಳನ್ನು ನಿಭಾಯಿಸಲು ಸ್ಥಳೀಯ ಜನರ ಜತೆ ಉತ್ತಮ ಸಂವಹನ ಅಗತ್ಯ. ಇದು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವವರಿಗೆ ಸುಲಭ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸ್ಥಳೀಯರ ನೇಮಕಾತಿ ಮುಖ್ಯ ಎನ್ನುತ್ತಾರೆ ಓರ್ವ ಪೊಲೀಸ್ ಅಧಿಕಾರಿ.

*ವೈಫಲ್ಯ ಯಾಕೆ?

ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಓರ್ವ ಅಧಿಕಾರಿ ಪ್ರಕಾರ ಪೊಲೀಸ್ ಉದ್ಯೋಗಕ್ಕಾಗಿ ಕರಾವಳಿ ಜನರು ಕೂಡ ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಅಂತಿಮವಾಗಿ ಆಯ್ಕೆಯಾಗುವವರು ಕನಿಷ್ಠ ಮಂದಿ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಪೊಲೀಸ್ ಉದ್ಯೋಗಕ್ಕೆ ತರಬೇತಿ ನೀಡುವ ಸಂಸ್ಥೆಗಳು ಇವೆ. ದೈಹಿಕ ಕ್ಷಮತೆ ಪಾಲನೆ ವಿಷಯದಲ್ಲಿ ಕೂಡ ಆ ಭಾಗದ ಜನರು ಗಂಭೀರ ಪ್ರಯತ್ನಗಳನ್ನು ನಡೆಸುತ್ತಾರೆ. ಆದ್ದರಿಂದ ನೇಮಕಾತಿ ವಿಷಯದಲ್ಲಿ ಅವರು ಹೆಚ್ಚಿನ ಯಶಸ್ಸು ಪಡೆಯುತ್ತಾರೆ.

ಸ್ಥಳೀಯರ ನೇಮಕಾತಿ ಪ್ರಮಾಣ ಹೆಚ್ಚಿಸಲು ಹಿಂದಿನ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಕೆಲ ಕಾಲ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದನ್ನು ನೆನಪಿಸಬಹುದು.

*ಬಡ್ತಿ ಕಳೆದುಕೊಳ್ಳಲು ರೆಡಿ:

ದಕ್ಷಿಣ ಕನ್ನಡದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಉದ್ಯೋಗ ಪಡೆಯುವ ಉತ್ತರ ಕರ್ನಾಟಕದ ಜನರು ಏಳು ವರ್ಷ ಬಳಿಕ ತಮ್ಮ ತವರು ಜಿಲ್ಲೆಗೆ ವರ್ಗಾವಣೆ ಪಡೆದುಕೊಳ್ಳಲು ನಿಯಮದಲ್ಲಿ ಅವಕಾಶವಿದೆ. ಆದರೆ ಬಡ್ತಿ ಕಳೆದುಕೊಳ್ಳಬೇಕಾಗುತ್ತದೆ. ಈ ಕಾರಣದಿಂದಲೇ ಇತ್ತ್ತೀಚೆಗೆ ಮಂಗಳೂರಿನಲ್ಲಿ ಬಡ್ತಿ ಪಡೆಯಲು ಅವಕಾಶವಿದ್ದ ಅನೇಕ ಪೊಲೀಸರು ‘ನನಗೆ ಈಗ ಬಡ್ತಿ ಬೇಡ’ ಎಂದು ಆಯುಕ್ತರಿಗೆ ಲಿಖಿತ ಅಭಿಪ್ರಾಯ ನೀಡಿದ್ದಾರೆ.

-----

ಪರಿಹಾರ ಏನು?

ಸರ್ಕಾರಿ ಉದ್ಯೋಗ ನೇಮಕಾತಿ ವಿಷಯದಲ್ಲಿ ಹಿಂದುಳಿದಿರುವ ಹೈದರಾಬಾದ್ ಕರ್ನಾಕದ ಜನರಿಗೆ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ 371(ಜೆ) ವಿಧಿಯಡಿ ಮೀಸಲಾತಿ ಒದಗಿಸಲಾಗಿದೆ. ಇದೇ ಮಾದರಿ ಕರಾವಳಿ ಕರ್ನಾಟಕದ ಜನರಿಗೆ ಪೊಲೀಸ್ ನೇಮಕಾತಿಯಲ್ಲಿ ಮೀಸಲಾತಿ ಒದಗಿಸಬೇಕು ಅಥವಾ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೇ.50 ಸ್ಥಳೀಯರ ನೇಮಕಾತಿಗೆ ಅವಕಾಶ ದೊರೆಯವಂತೆ ನಿಯಮಕ್ಕೆ ತಿದ್ದುಪಡಿ ತರಬೇಕು. ಜತೆಗೆ ಹೆಚ್ಚಿನ ಉದ್ಯೋಗ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಪೊಲೀಸ್ ಉದ್ಯೋಗಕ್ಕೆ ಯುವಜನರನ್ನು ಸಿದ್ಧಪಡಿಸುವ ಪ್ರಯತ್ನ ಕರಾವಳಿ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಬೇಕು ಎನ್ನುವುದು ವಿಷಯ ಪರಿಣಿತರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net