ಎಸ್ಸೆಸ್ಸೆಲ್ಸಿ ಫಲಿತಾಂಶ: ಐದರಿಂದ ಮೂರನೇ ಸ್ಥಾನಕ್ಕೇರಿದ ಉತ್ತರ ಕನ್ನಡ

karnataka-sslc-2025-class-10-results-1
Published on

ಕಾರವಾರ: ಕರಾವಳಿಯ ಐದು ತಾಲೂಕುಗಳನ್ನು ಒಳಗೊಂಡ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಶೇ. 83.21 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜಿಲ್ಲೆ ರಾಜ್ಯದಲ್ಲಿ 3 ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ಜಿಲ್ಲೆ 5 ನೇ ಸ್ಥಾನ ಪಡೆದಿತ್ತು. ಈ ಬಾರಿ ಜಿಲ್ಲೆಯ 66 ವಿದ್ಯಾರ್ಥಿಗಳು ರಾಜ್ಯದಲ್ಲಿ 2 ರಿಂದ 10 ನೇ ರ‍್ಯಾಂಪ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಭಟ್ಕಳ ತಾಲೂಕಿನ ಶೇ.88.75 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಾಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಹೊನ್ನಾವರ ಶೇ.88.70, ಕುಮಟಾ ಶೇ.82.98, ಅಂಕೋಲಾ ಶೇ.76.07, ಕಾರವಾರ ಶೇ.76.03 ಫಲಿತಾಂಶ ಪಡೆದು ನಂತರದ ಸ್ಥಾನದಲ್ಲಿವೆ.

ಹೆಣ್ಮಕ್ಳೇ ಸ್ಟ್ರಾಂಗು ಗುರು:

ಜಿಲ್ಲೆಯಲ್ಲಿ 4,451 ಗಂಡು, 4,439 ಹೆಣ್ಣು ಸೇರಿ ಒಟ್ಟು 8,890 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 3,415 ಗಂಡು, 3,982 ಹೆಣ್ಣು ಸೇರಿ ಒಟ್ಟು 7,397 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದರೆ ಶೇ. 76.72 ರಷ್ಟು ಗಂಡು, ಶೇ. 89.70 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ ವಿದ್ಯಾರ್ಥಿಗಳಲ್ಲಿ 1,138 ವಿದ್ಯಾರ್ಥಿಗಳು ಎ ಪ್ಲಸ್, 1,628 ವಿದ್ಯಾರ್ಥಿಗಳು ಎ, 1,660 ಬಿ ಪ್ಲಸ್, 1,604 ಬಿ, 1,164 ಸಿ ಪ್ಲಸ್, 203 ಸಿ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 3,321 ವಿದ್ಯಾರ್ಥಿಗಳು ಹಾಜರಾಗಿದ್ದು, 2,713 ವಿದ್ಯಾರ್ಥಿಗಳು(ಶೇ.81.70) ಉತ್ತೀರ್ಣರಾಗಿದ್ದಾರೆ, ಗ್ರಾಮೀಣ ಭಾಗದ 5,568 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 4,684 ವಿದ್ಯಾರ್ಥಿಗಳು (ಶೇ.84.12) ಉತ್ತೀರ್ಣರಾಗಿದ್ದಾರೆ.

ಒಟ್ಟು 60 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಅವುಗಳ ಶೇ. 86.26 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 83 ಅನುದಾನಿತ ಪ್ರೌಢಶಾಲೆಗಳ ಶೇ. 75.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 55 ಅನುದಾನ ರಹಿತ ಪ್ರೌಢಶಾಲೆಗಳಿದ್ದು ಅಲ್ಲಿನ ಶೇ. 90.84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net