ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಗೆ ಬೆಂಬಲ-ಶಾಸಕ ಸೈಲ್‌ ಭರವಸೆ

Railway-Seva-samiti-Meeting
Published on

ಕಾರವಾರ: ಜಿಲ್ಲೆಗೆ ಉತ್ತಮ ರೈಲ್ವೆ ಸೇವೆ ಪಡೆಯಲು ಹೋರಾಟ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ. ಅದರ ಬೆಂಬಲಕ್ಕಿದ್ದೇನೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ನಗರದ ಪ್ರಸಿದ್ಧ ಈಡನ್ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜನೆಯಾಗಿದ್ದ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣ. ಕೊಂಕಣ ರೈಲ್ವೆ ಮಾರ್ಗದಲ್ಲಿ ಜಿಲ್ಲೆಗೆ ಬೇಕಾದ ಸೌಲಭ್ಯ ಒದಗಿಸಲು ಸಮಿತಿ ಶಿಸ್ತು ಬದ್ಧವಾಗಿ ಕಾನೂನು ಹೋರಾಟ ನಡೆಸಿದೆ. ಫಲವಾಗಿ ಸಾಕಷ್ಟು ಪ್ರಯೋಜನಗಳು ದೊರಕಿವೆ ಎಂದರು. ಸಮಿತಿಯ ಗೌರವ ಅಧ್ಯಕ್ಷ ಮಂಗಲದಾಸ ಕಾಮತ್, ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ಕಾರ್ಯಾಧ್ಯಕ್ಷ ರಾಜೀವ ಗಾಂವಕರ್, ಉಪಾಧ್ಯಕ್ಷ ವೆಂಟು ಮಾಸ್ತರ ಶೀಳ್ಯಾ, ಕೋಶಾಧ್ಯಕ್ಷ ಮಹೇಶ ಗೂಳಿಕಟ್ಟೆ, ಅವರ ಕಾರ್ಯವನ್ನು ಶ್ಲಾಘಿಸಿದರು. ಸಮಿತಿಯ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.
ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣವಾಗಬೇಕು ಎಂಬುದು ನಮ್ಮ ಪ್ರಮುಖ ಗುರಿಯಾಗಿದೆ. ಆ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸಿದ್ದು, ಪ್ರಥಮ ಹಂತದ ಜಯ ದೊರಕಿದೆ. ವಕೀಲರಾದ ಅಕ್ಷಯ ಕೊಲ್ಲೆ ಹಾಗೂ ರವೀಂದ್ರ ಕೊಲ್ಲೆ ಅವರು ಸಮಿತಿಯ ಪರವಾಗಿ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿದರು. ಅವರ ಕಾರ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ರಾಜೀವ ಗಾಂವಕರ್ ದಾಖಲೆ ಸಂಗ್ರಹಿಸುವಲ್ಲಿ ಮಾಡಿದ ಕಾರ್ಯವನ್ನು ನೆನಪಿಸಿಕೊಂಡರು. ಸಮಿತಿಯ ಹೋರಾಟದ ಹಾದಿಯನ್ನು ವಿವರಿಸಿದರು. ಕೋಸ್ಟ್ಗಾರ್ಡ್ ನಿವೃತ್ತ ಐಜಿ ಮನೋಜ ಬಾಡಕರ್ ಮಾತನಾಡಿ, ಜಿಲ್ಲೆಗೆ ಅನುಕೂಲವಾಗುವ ಇಂಥ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಲು ಸಿದ್ದನಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net