

ಕಾರವಾರ: ಅಪರಿಚಿತ ಕಾರಿನಿಂದ ಅಪಘಾತಕ್ಕೆ ಒಳಗಾದ ಕಾರ್ಮಿಕನೊಬ್ಬ ಸೂಕ್ತ ಚಿಕಿತ್ಸೆಗಾಗಿ ಪರದಾಡಿ ಮೃತಪಟ್ಟ ದಾರುಣ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾ ಬೋಳೆ ಗ್ರಾಮದ ಚಂದ್ರಹಾಸ ಆಗೇರ(50) ಮೃತರು. ಅಕ್ಟೋಬರ್ 27 ರಂದು ಮಧ್ಯಾಹ್ನ ಅಂಕೋಲಾ ಶೆಟಗೇರಿ ಬಳಿ ರಾಷ್ಟಿçÃಯ ಹೆದ್ದಾರಿ 66 ರಲ್ಲಿ ಅಪಘಾತ ಸಂಭವಿಸಿತ್ತು. ತಲೆ ಹಾಗೂ ಕಾಲಿಗೆ ತೀವ್ರ ಗಾಯಗೊಂಡಿದ್ದ ಚಂದ್ರಹಾಸ ಅವರಿಗೆ ಚಿಕಿತ್ಸೆ ಕೊಡಿಸಲು ಅವರ ಕುಟುಂಬಸ್ಥರು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಮಂಗಳೂರಿಗೆ ಕರೆದೊಯ್ದರೂ ಬೆಡ್ ಸಿಗಲಿಲ್ಲ. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಲು ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಮುಂದಾಗಿಲ್ಲ. ತೀವ್ರವಾಗಿ ಅಸ್ವಸ್ಥರಾಗಿದ್ದ ಚಂದ್ರಹಾಸ ಅವರು 12 ತಾಸು ಚಿಕಿತ್ಸೆ ಸಿಗದೇ ಬದುಕಿಗಾಗಿ ಹೋರಾಟ ನಡೆಸಿದರು. ಸುಮಾರು 600 ಕಿಮೀ ಆಂಬುಲೆನ್ಸ್ನಲ್ಲಿ ಅವರನ್ನು ಸುತ್ತಿಸಬೇಕಾಯಿತು. ಕೊನೆಗೂ ಅವರು ಚಿಕಿತ್ಸೆ ಸಿಗದೇ ಮೃತಪಟ್ಟರು ಎಂದು ಅವರ ಸಹೋದರಿಯ ಪುತ್ರಿ(ಸೊಸೆ) ಶ್ವೇತಾ ಆಗೇರ ಬೇಸರ ವ್ಯಕ್ತಪಡಿಸಿದ್ದಾರೆ. ಚಂದ್ರಹಾಸ ಆಗೇರ ಅವರ ಕುಟುಂಬದ ತೀರ ಬಡತನದಲ್ಲಿದೆ. ಅವರು ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಅವರ ಪತ್ನಿ ಮನೆಗೆಲಸಕ್ಕೆ ಹೋಗುತ್ತಾರೆ. ಕವಿತಾ ಹಾಗೂ ಕಾವ್ಯ ಎಂಬ ಇಬ್ಬರು ಪುತ್ರಿಯರು ಇನ್ನೂ ಓದುತ್ತಿದ್ದಾರೆ. ಸೋಮವಾರ ಚಂದ್ರಹಾಸ ಅವರು ಮಧ್ಯಾಹ್ನ ಕೂಲಿ ಕೆಲಸ ಮಾಡಿ ಮನೆಗೆ ಊಟಕ್ಕೆ ಬರುವಾಗ ಹಿಮ್ಮುಖವಾಗಿ ಚಲಿಸಿದ ಅಪರಿಚಿತ ಕಾರು ಚಂದ್ರಹಾಸ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. 108 ಆಂಬುಲೆನ್ಸ್ಗೆ ಕರೆ ಮಾಡಿದರೂ ಬರುವುದು ವಿಳಂಬವಾಗಿತ್ತು. ಹಾಗಾಗಿ ಸ್ಥಳೀಯರು ಖಾಸಗಿ ವಾಹನದಲ್ಲಿ ಗಾಯಾಳುವನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರ ಕ್ರಿಮ್ಸ್ಗೆ ಕಳಿಸಿಕೊಡಲಾಯಿತು. ಆದರೆ, ಕಾರವಾರ ಕ್ರಿಮ್ಸ್ನಲ್ಲೂ ಅವರಿಗೆ ಚಿಕಿತ್ಸೆ ಸಾಧ್ಯವಿಲ್ಲ ಎಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಆದರೆ, ವೆನ್ಲಾಕ್‌ನಲ್ಲಿ ಐಸಿಯು ಬೆಡ್‌ಗಳು ಖಾಲಿಯಾಗಿವೆ ಎಂದು ತಿಳಿಸಿ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಯಿತು. ಮಂಗಳೂರು, ಉಡುಪಿಯ ಎರಡು ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತದ ಅಡಿ ಚಿಕಿತ್ಸೆ ಕೊಡಿಸಲು ನಿರಾಕರಿಸಿದವು. ತಕ್ಷಣ ಹಣ ಕಟ್ಟುವಂತೆ ಸೂಚನೆ ನೀಡಿದವು. `ಆದರೆ, ಆ ರಾತ್ರಿ ನಮ್ಮ ಬಳಿ ಹಣವಿರಲಿಲ್ಲ. ನಾವು ಕೂಲಿ ಕೆಲಸ ಮಾಡುವವರಾಗಿದ್ದು, ಅವರು ಕೇಳಿದಷ್ಟು ಹಣವನ್ನು ಸುಲಭವಾಗಿ ಹೊಂದಿಸಲೂ ಸಾಧ್ಯವಾಗಲಿಲ್ಲ. ಇದರಿಂದ ಕಾರವಾರ ಆಸ್ಪತ್ರೆಗೆ ವಾಪಸ್ ಕರೆತರಲು ನಿರ್ಧರಿಸಿದೆವು. ಆದರೆ, ಕಾರವಾರಕ್ಕೆ ಬರುವ ಮಾರ್ಗದಲ್ಲೇ ಮಾವ ಮೃತಪಟ್ಟರು' ಎಂದು ಚಂದ್ರಹಾಸ ಅವರ ಸಹೋದರಿಯ ಪುತ್ರಿ ಶ್ವೇತಾ ಅವರು ಚಿಕಿತ್ಸೆಗಾಗಿ ಪರದಾಡಿದ ಕ್ಷಣಗಳನ್ನು ಕಣ್ಣೀರು ಹಾಕುತ್ತ ನೆನೆಸಿಕೊಂಡರು. ಕಾರವಾರ ಕ್ರಿಮ್ಸ್ ಆಂಬುಲೆನ್ಸ್ ಮಂಗಳೂರಿಗೆ ಹೋಗಿ ಬಂದ ಡೀಸೆಲ್ ಖರ್ಚು 6500 ರೂ. ಆಗಿತ್ತು. ಅದನ್ನು ಕೊಡಲು ಕುಟುಂಬಸ್ಥರ ಬಳಿ ಹಣವಿರಲಿಲ್ಲ. ಸಂಬಂಧಿಕರು, ಸ್ಥಳೀಯ ಮೂಖಂಡರಿAದ ಹಣ ಸೇರಿಸಿ ಕೊಟ್ಟು ಶವವನ್ನು ವಾಪಸ್ ತಂದಿದ್ದೇವೆ ಎಂದು ಕುಟುಂಬಸ್ಥರು ಗೋಳು ತೋಡಿಕೊಳ್ಳುತ್ತಾರೆ. ಆಸ್ಪತ್ರೆ ಇಲ್ಲದ ಗೋಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಯಾವಾಗಿನಿಂದಲೇ ಇದೆ. ಆದರೆ, ಇಲ್ಲಿ ಸೌಲಭ್ಯ ಇಲ್ಲದ ಕಾರಣ ಹಲವು ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾಗಿದೆ ಎಂದು ಜಿಲ್ಲೆಯ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಸರ್ಜನ್, ವೆನ್ಲಾಕ್ ಆಸ್ಪತ್ರೆಡಾ.ಶಿವಪ್ರಕಾಶ್ನಮ್ಮಲ್ಲಿ 116 ಐಸಿಯು ಬೆಡ್‌ಗಳಿವೆ. ಆದರೆ, ಹೊರ ಜಿಲ್ಲೆ, ರಾಜ್ಯಗಳಿಂದಲೂ ಸಾಕಷ್ಟು ರೋಗಿಗಳು ಬರುವುದರಿಂದ ದಕ್ಷಿಣ ಕನ್ನಡದವರಿಗೂ ಹಲವು ಬಾರಿ ಬೆಡ್ ಸಿಗುವುದಿಲ್ಲ. ಗಂಭೀರ ಪ್ರಕರಣಗಳನ್ನು ನಾವು ಐಸಿಯು ಬೆಡ್ ಇಲ್ಲದೇ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಅಂಥ ಸಂದರ್ಭಗಳಲ್ಲಿ ನಾವು ಆಯುಷ್ಮಾನ್ ರೆಫರಲ್‌ನೊಂದಿಗೆ ಖಾಸಗಿ ಆಸ್ಪತ್ರೆಗಳಿಗೆ ಕಳಿಸುತ್ತೇವೆ. ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ರೋಗಿಗಳನ್ನು ಏಕೆ ನಿರಾಕರಿಸಿದರು ಎಂಬುದು ತಿಳಿದಿಲ್ಲ.