

ಕಾರವಾರ: ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಜಿಲ್ಲೆಯ ಭಟ್ಕಳದಿಂದ ಎರಡನೇ ಬಾರಿ ಆಯ್ಕೆಯಾದ ಮಂಕಾಳ ವೈದ್ಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜಿಲ್ಲೆಯ ಮೀನುಗಾರರ ಸಮುದಾಯಕ್ಕೆ ಮೊದಲ ಬಾರಿ ಸಚಿವ ಪಟ್ಟ ಲಭಿಸಿದ್ದಕ್ಕೆ ಬೆಸ್ತರು ಸಂಭ್ರಮಿಸಿದ್ದಾರೆ.
ಇನ್ನೊಂದೆಡೆ ರಾಜ್ಯದ ಹಿರಿಯ ಕಾಂಗ್ರೆಸ್ಸಿಗ ಆರ್.ವಿ. ದೇಶಪಾಂಡೆ ಸಚಿವ ಸ್ಥಾನದಿಂದ ವಂಚಿತರಾಗಿರುವುದು ಚರ್ಚೆಗೆ ಕಾರಣವಾಗಿದೆ. ಉತ್ತರ ಕನ್ನಡ ಕಾಂಗ್ರೆಸ್‌ನಲ್ಲಿ ಸುಮಾರು ನಾಲ್ಕು ದಶಕಗಳ ಆರ್‌ವಿಡಿ ಪಾರುಪತ್ಯ ಹಿನ್ನೆಲೆಗೆ ಸರಿಯುತ್ತಿರುವ ಸೂಚನೆ ಲಭಿಸಿದೆ. ಈ ಮೂಲಕ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಹೊಸ ಶಕೆ ಪ್ರಾರಂಭವಾಗಿದೆ.
16 ವರ್ಷಗಳ ನಂತರ ಭಟ್ಕಳ ಕ್ಷೇತ್ರದವರೊಬ್ಬರು ಸಚಿವರಾಗಿದ್ದಾರೆ. ಈ ಹಿಂದೆ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಎಸ್.ಎಂ.ಯಾಹ್ಯಾ ಹಾಗೂ ಆರ್.ಎನ್. ನಾಯ್ಕ ಕಾಂಗ್ರೆಸ್‌ನಿಂದ ಗೆದ್ದು ಸಚಿವರಾಗಿದ್ದರು.
z006ರಲ್ಲಿ ಶಿವಾನಂದ ನಾಯ್ಕ ಬಿಜೆಪಿಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದರು. ಉತ್ತರ ಕನ್ನಡ ಕರಾವಳಿಗೆ 12 ವರ್ಷಗಳ ಬಳಿಕ ಸಚಿವ ಸ್ಥಾನ ಲಭಿಸಿದೆ. ಪ್ರಭಾಕರ ರಾಣೆ ನಂತರ 2008ರಲ್ಲಿ ಆನಂದ ಅಸ್ನೋಟಿಕರ್ ಸಚಿವರಾಗಿದ್ದರು.
ಮೀನುಗಾರಿಕೆ ಖಾತೆ..?: ಮಂಕಾಳ ವೈದ್ಯ ಅವರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಜಿಲ್ಲೆಯ ಏಕೈಕ ಸಚಿವರಾಗಿದ್ದರಿಂದ ಉಸ್ತುವಾರಿ ಸಚಿವ ಸ್ಥಾನವನ್ನೂ ಅವರಿಗೇ ನೀಡುವ ಸಾಧ್ಯತೆ ಹೆಚ್ಚಿದೆ. ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ವಹಿಸುವ ಬಗ್ಗೆಯೂ ಚರ್ಚೆ ನಡೆದಿದ್ದು, ಹಾಗೇನಾದರೂ ಮಾಡಿದಲ್ಲಿ ಉತ್ತರ ಕನ್ನಡದ ಉಸ್ತುವಾರಿ ಬೇರೆ ಜಿಲ್ಲೆಯವರು ನೋಡಬೇಕಾಗುತ್ತದೆ.
ದೇಶಪಾಂಡೆ ಹುದ್ದೆ ತಪ್ಪಿದ್ದೇಕೆ..?: ಹಿಂದೆ ಜನತಾ ಪರಿವಾರ ಹಾಗೂ ಕಾಂಗ್ರೆಸ್‌ನ ಎಲ್ಲ ಸರ್ಕಾರಗಳ ಅವಧಿಯಲ್ಲಿ ದೇಶಪಾಂಡೆ ಸಚಿವರಾಗಿದ್ದರು. ಕಂದಾಯ, ಕೃಷಿ, ಸಹಕಾರ, ಉನ್ನತ ಶಿಕ್ಷಣ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಪ್ರವಾಸೋದ್ಯಮ ಹೀಗೆ ಎಲ್ಲ ಖಾತೆಗಳನ್ನು ನಿಭಾಯಿಸಿದ್ದರು.
ನಾಲ್ಕು ದಶಕಗಳ ಕಾಲ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಯಾವುದೇ ಸರ್ಕಾರ ಬಂದರೂ ಸಚಿವ ಸ್ಥಾನ ಗಿಟ್ಟಿಸಿಕೊಂಡು ಬರುವಷ್ಟರ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಜತೆ ಸಂಪರ್ಕವನ್ನು ದೇಶಪಾಂಡೆ ಇಟ್ಟುಕೊಂಡಿದ್ದರು. ಈ ಬಾರಿಯೂ ಅವರು ಸಚಿವ ಸ್ಥಾನದ ಲಾಬಿಗಾಗಿ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ, ಅವರ ಸಂಪರ್ಕ, ಅನುಭವ, ತಂತ್ರಗಳು ವಿಲವಾಗಿವೆ.
ಡಿಕೆಶಿ ಜತೆ ಮುನಿಸು ಮುಳುವಾಯಿತೇ..?: 9 ಬಾರಿ ಶಾಸಕರಾದ ಅತ್ಯಂತ ಅನುಭವಿ ಸಂಸದೀಯ ಪಟುವಾಗಿದ್ದ ಅವರನ್ನು ಕಾಂಗ್ರೆಸ್ ಸ್ಪೀಕರ್ ಸ್ಥಾನದಲ್ಲಿ ಕೂರಿಸುವ ಚಿಂತನೆ ನಡೆಸಿತ್ತು. ಆದರೆ, ಅದಕ್ಕೆ ದೇಶಪಾಂಡೆ ಒಪ್ಪದ ಕಾರಣ ಅವರನ್ನು ಸಚಿವ ಹುದ್ದೆಯಿಂದಲೂ ದೂರ ಇರಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಪಕ್ಷದ ಭವಿಷ್ಯದ ದೃಷ್ಟಿಯಿಂದ ಹಿರಿಯನ್ನು ಬದಿಗಿಟ್ಟು ,ಹೊಸ ನಾಯಕರನ್ನು ಪ್ರವರ್ಧಮಾನಕ್ಕೆ ತರಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಆರ್‌ವಿಡಿಗೆ ಸಚಿವಗಿರಿ ತಪ್ಪಲು ಇನ್ನೊಂದು ಕಾರಣ.
ಜಾತಿ ಲೆಕ್ಕಾಚಾರದಲ್ಲಿ ಯೋಚಿಸಿದರೆ ದೇಶಪಾಂಡೆ ಕಡಿಮೆ ಮತದಾರರನ್ನು ಹೊಂದಿದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಆ ಕೋಟಾದಡಿ ದಿನೇಶ ಗುಂಡುರಾವ್ ಸ್ಥಾನ ಪಡೆದಿದ್ದರಿಂದ ಇವರು ಹುದ್ದೆಯಿಂದ ವಂಚಿತರಾಗಿದ್ದಾರೆ. ಇವು ಎದುರಿಗೆ ಕಂಡುಬರುವ ಸಾಮಾನ್ಯ ಅಂಶಗಳಾಗಿದ್ದರೆ , ಆರ್‌ವಿಡಿಗೆ ಸಚಿವ ಸ್ಥಾನ ಕೈತಪ್ಪಲು ಪಕ್ಷದೊಳಗಿನ ಬೇರೆ ಒಳಸುಳಿಗಳೂ ಇಲ್ಲದಿಲ್ಲ.
ಆರ್.ವಿ.ದೇಶಪಾಂಡೆ ಸಿದ್ದರಾಮಯ್ಯ ಅವರ ಆಪ್ತರು. ದಾವಣಗೆರೆಯಲ್ಲಿ ಆಯೋಜಿಸಿದ್ದ ಸಿದ್ದರಾಮೋತ್ಸವವನ್ನು ಮುಂದೆ ನಿಂತು ಯಶಸ್ಸು ಮಾಡಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆ ಆರ್‌ವಿಡಿ ಸಂಬಂಧ ಅಷ್ಟಕ್ಕಷ್ಟೆ ಎಂಬಂತೆ ಇದೆ.
ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಆರ್.ವಿ.ದೇಶಪಾಂಡೆ ತಮ್ಮ ಕ್ಷೇತ್ರದಿಂದ ಜನರನ್ನು ಕಳಿಸಿಕೊಟ್ಟಿಲ್ಲ ಎಂಬ ಕಾರಣಕ್ಕೆ ಡಿಕೆಶಿ ದೇಶಪಾಂಡೆ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದರು.
ಟಿಕೆಟ್ ಕೊಡುವಾಗ ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕಿದ್ದರು. ಇನ್ನೂ ಕೆಲವು ವೇದಿಕೆಗಳಲ್ಲಿ ಅವರ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಿದೆ. ಆದರೆ, ಆರ್‌ವಿಡಿ ಅವೆಲ್ಲವನ್ನೂ ಮೀರಿ ಕಾಂಗ್ರೆಸ್ ಟಿಕೆಟ್ ಪಡೆದು, ಹಳಿಯಾಳ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಈಗ ಡಿ.ಕೆ.ಶಿವಕುಮಾರ್ ಆರ್‌ವಿಡಿಅವರಿಗೆ ಸಚಿವ ಸ್ಥಾನ ತಪ್ಪಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಮಂಕಾಳ ವೈದ್ಯ ಅವರು ಸ್ವತಃ ಮೀನುಗಾರಿಕೆ ದೋಣಿ ಹೊಂದಿದ್ದು, ಮೀನುಗಾರಿಕೆ ಮಾಡಿ ಅದರ ಸಮಸ್ಯೆಗಳನ್ನು ಅರಿತವರು. ಇದರಿಂದ ಅವರಿಗೆ ಮೀನುಗಾರಿಕೆ ಸಚಿವ ಸ್ಥಾನ ಸಿಕ್ಕಲ್ಲಿ ತಮ್ಮ ಹಲವು ಸಮಸ್ಯೆಗಳು ಬಗೆಹರಿಯಲಿವೆ. ಮೀನುಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಭರವಸೆ ನಮಗಿದೆ.ರಾಜು ತಾಂಡೇಲಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ೆಡರೇಷನ್ ಅಧ್ಯಕ್ಷ