

ಕಾರವಾರ: ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಅಂದರೆ ಮೇ 22ರ ಬೆಳಗ್ಗೆ 6 ಗಂಟೆಯಿಂದ 24 ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್ಡೌನ್ ಘೊಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುರುವಾರ ಆದೇಶಿಸಿದ್ದಾರೆ.
ವಾರಾಂತ್ಯದಲ್ಲಿ ತರಕಾರಿ ಮುಂತಾದ ಸಾಮಗ್ರಿ ಖರೀದಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆದೇಶದಂತೆ ಈ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಕಾರವಾರ ಹಾಗೂ ದಾಂಡೇಲಿ ನಗರಗಳನ್ನು ಕಂಟೇನ್ಮೆಂಟ್ ವಲಯ ಎಂದು ಘೊಷಿಸಲಾಗಿತ್ತು. ಈಗ ಹೊಸದಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ಪಟ್ಟಣ ವ್ಯಾಪ್ತಿಯನ್ನು ವಿಶೇಷ ಕಂಟೇನ್ಮೆಂಟ್ ವಲಯ ಎಂದು ಘೊಷಿಸಲಾಗಿದೆ. ಮೇ 22ರಿಂದ ವೈದ್ಯಕೀಯ ಸೇವೆ, ಅತೀ ತುರ್ತು ಸೇವೆ, ಹಾಗೂ ಸರ್ಕಾರಿ ನೌಕರರನ್ನು ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಓಡಾಡಲು ಅನುಮತಿಸಲಾಗಿದ್ದು, ಉಳಿದ ಎಲ್ಲ ವಾಹನ ಓಡಾಟವನ್ನು ನಿರ್ಬಂಧಿಸಲಾಗಿದೆ. ಅನುಮತಿ ಪಡೆದವರು ಹಾಲು, ಹಣ್ಣು, ದಿನಸಿಗಳನ್ನು ಮನೆ, ಮನೆಗೆ ತೆರಳಿ ಮಾರಾಟ ಮಾಡುವುದು, ಔಷಧ ಅಂಗಡಿ ತೆರೆಯುವುದನ್ನು ಬಿಟ್ಟು ಉಳಿದ ಎಲ್ಲ ರೀತಿಯ ವಾಣಿಜ್ಯಿಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
57 ಗ್ರಾಪಂಗಳು ಸೀಲ್: ಜಿಲ್ಲೆಯ ಕಾರವಾರ, ಅಂಕೋಲಾ, ಜೊಯಿಡಾ, ದಾಂಡೇಲಿಯ ತಲಾ 2, ಭಟ್ಕಳ,ಹಳಿಯಾಳ, ಹೊನ್ನಾವರ, ಮುಂಡಗೋಡಿನ ತಲಾ 1, ಯಲ್ಲಾಪುರ, ಸಿದ್ದಾಪುರದ ತಲಾ 3 ಗ್ರಾಪಂಗಳು ಸೇರಿ ಇದುವರೆಗೆ ಜಿಲ್ಲೆಯ 57 ಗ್ರಾಪಂಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಮೇ 15ರಿಂದ ಜಿಲ್ಲೆಯ 38 ಗ್ರಾಪಂಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿತ್ತು. ಸೋಂಕು ಹೆಚ್ಚಿರುವ ಇನ್ನೂ 19 ಗ್ರಾಪಂಗಳನ್ನು 20ರಿಂದ ಸೀಲ್ಡೌನ್ ಮಾಡಲಾಗಿದೆ.
13 ಕಡೆ ಬ್ಯಾರಿಕೇಡ್: ಕಾರವಾರ ಶಹರದ 13 ಸಣ್ಣ ದಾರಿಗಳನ್ನು ಬ್ಯಾರಿಕೇಡ್ ಹಾಕಿ ಸೀಲ್ ಮಾಡಲಾಗಿದೆ. ಮುಖ್ಯ ರಸ್ತೆಗಳಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದರೆ ಒಳ ರಸ್ತೆಗಳ ಮೂಲಕ ಜನ ಓಡಾಟ ಮಾಡುತ್ತಿದ್ದರು. ಅದನ್ನು ತಪ್ಪಿಸಲು ನಗರಸಭೆ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಅಲ್ಲದೆ, ಶಿರವಾಡ ಗ್ರಾಪಂ ವ್ಯಾಪ್ತಿಯ ಕೆಲ ರಸ್ತೆಗಳನ್ನು ಸೀಲ್ ಮಾಡಲಾಗಿದೆ.
ಶಿರಸಿ ನಗರವೂ ಸ್ಥಗಿತ
ಶಿರಸಿ: ಶಿರಸಿ ನಗರವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಿದ್ದು, ಮೇ 22ರ ಬೆಳಗ್ಗೆ 6 ಗಂಟೆಯಿಂದ 24ರ ಬೆಳಗ್ಗೆ 6 ಗಂಟೆವರೆಗೆ ಇಡೀ ನಗರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದ ಅವರು, ನಗರದಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇಡೀ ನಗರವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ವ್ಯಾಪ್ತಿಯಲ್ಲಿ ಔಷಧ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದರು.
ಹಾಲು, ಹಾಲಿನ ಉತ್ಪನ್ನ ಮಾರಾಟ, ಮನೆಮನೆಗೆ ದಿನಸಿ, ತರಕಾರಿ, ಹಣ್ಣುಗಳ ವಿತರಣೆ, ಹೊರತುಪಡಿಸಿ ಎಲ್ಲ ವಾಣಿಜ್ಯ, ಕೈಗಾರಿಕೆ ಚಟುವಟಿಕೆ ಸ್ಥಗಿತಗೊಳಿಸಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
21 ಗ್ರಾಪಂಗಳಲ್ಲಿ 50ಕ್ಕಿಂತ ಹೆಚ್ಚು ಸೋಂಕಿತರು
ಕಾರವಾರ: ಗ್ರಾಪಂ ವ್ಯಾಪ್ತಿಯಲ್ಲೇ ಕೋವಿಡ್ ಸೋಂಕು ಅತಿ ಹೆಚ್ಚು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶಿರಸಿಯ ಬನವಾಸಿ, ಭಟ್ಕಳದ ಶಿರಾಲಿ, ಸಿದ್ದಾಪುರದ ಕೋಲಸಿರ್ಸಿ ಮುಂತಾದೆಡೆ ಕೆಲ ಪಟ್ಟಣ ಪಂಚಾಯಿತಿಗಿಂತ ಹೆಚ್ಚು ಕರೊನಾ ಪ್ರಕರಣಗಳಿವೆ ಎಂಬುದು ಭೀತಿ ಹುಟ್ಟಿಸುವಂತೆ ಮಾಡಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿದ ಮೇ 10 ರಿಂದ 19ರವರೆಗಿನ ಸ್ಥಳೀಯ ಸಂಸ್ಥೆವಾರು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಶಿರಸಿ, ಕಾರವಾರ ನಗರಸಭೆಗಳನ್ನು ಬಿಟ್ಟರೆ ಗ್ರಾಮಗಳೇ ಮುಂದಿವೆ. ಹಲವು ಗ್ರಾಪಂಗಳಲ್ಲಿ ವಾರದ ಸೋಂಕಿತರ ಸಂಖ್ಯೆ 50ರ ಗಡಿ ದಾಟಿದೆ.
ಶಿರಸಿಯ ಬನವಾಸಿಯಲ್ಲಿ 107, ಗುಡ್ನಾಪುರ-68, ಭಾಶಿ-62, ಸಿದ್ದಾಪುರದ ಮನ್ಮನೆ-88, ಕೋಲಸಿರ್ಸಿ-96, ಕಾವಂಚೂರು-51, ಕಾನಗೋಡ-52, ಹಸರಗೋಡ-68, ಅಣಲೆಬೈಲ್-94, ಹಲಗೇರಿ-69, ಯಲ್ಲಾಪುರದ ಹಿತ್ಲಳ್ಳಿ-73, ಕುಂದರಗಿ-90, ಕಂಪ್ಲಿ-94, ನಂದೊಳ್ಳಿ-67, ಆನಗೋಡ-51, ಮುಂಡಗೋಡಿನ ಗುಂಜಾವತಿ-71, ಜೊಯಿಡಾದ ರಾಮನಗರ-83, ಜೊಯಿಡಾ-79, ಹೊನ್ನಾವರದ ರ್ಕ-62, ಭಟ್ಕಳದ ಶಿರಾಲಿ-100 ಸೋಂಕಿತರು ಪತ್ತೆಯಾಗಿದ್ದಾರೆ.
ಗುಣಮುಖರ ಸಂಖ್ಯೆ ಹೆಚ್ಚು: ಜಿಲ್ಲೆಯಲ್ಲಿ ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ಹಚ್ಚುತ್ತಿದೆ. ಬುಧವಾರ ರಾತ್ರಿಯ ಜಿಲ್ಲಾ ಹೆಲ್ತ್ ಬುಲೆಟಿನ್ನಂತೆ ಜಿಲ್ಲೆಯಲ್ಲಿ 631 ಜನರಿಗೆ ಸೊಂಕು ಖಚಿತವಾಗಿದೆ. ಕಾರವಾರದಲ್ಲಿ ಇಬ್ಬರು, ಅಂಕೋಲಾ, ಹೊನ್ನಾವರದಲ್ಲಿ ತಲಾ ಒಬ್ಬ, ಭಟ್ಕಳ ಮುಂಡಗೋಡಿನಲ್ಲಿ ತಲಾ ಮೂವರು ಮೃತಪಟ್ಟಿದ್ದಾರೆ. 1335 ಜನ ಗುಣವಾಗಿದ್ದಾರೆ. 7 ಸಾವಿರ ದಾಟಿದ್ದ ಜಿಲ್ಲೆಯ ಸಕ್ರಿಯ ಪ್ರಕರಣದ ಸಂಖ್ಯೆ 6554 ಕ್ಕೆ ಇಳಿದಿದೆ. 434 ಜನ ಆಸ್ಪತ್ರೆಗಳಲ್ಲಿದ್ದು, 6120 ಜನ ಮನೆಗಳಲ್ಲೇ ಇದ್ದಾರೆ.