

ದೊಡ್ಡಬೆಳವಂಗಲ: ಹೋಬಳಿಯ ಮಲೋಹಳ್ಳಿಯಲ್ಲಿ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.
ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಶ್ರೀ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗ್ರಾಮದ ಎಲ್ಲ ದೇವಾಲಯಗಳಿಗೆ ಕರೆತಂದು, ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ರಥದಲ್ಲಿ ಕುಳ್ಳಿರಿಸಿ ಮಹಾಮಂಗಳಾರತಿ ಬಳಿಕ ಭಕ್ತರು ರಥವನ್ನು ಎಳೆದರು. ಭಕ್ತರು ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿ ರಥಕ್ಕೆ ಸೂರು ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆ ಸಲ್ಲಿಸಿದರು. ಮಿನಿಟೆಂಪೋ, ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ರಥದ ಸುತ್ತ ಒಡಿಸಲಾಯಿತು. ಪಾನಕ, ಹೆಸರುಬೇಳೆ, ರಸಾಯನವನ್ನು ವಿತರಿಸಲಾಯಿತು.
ವೀರಗಾಸೆ ಕುಣಿತ, ಡೊಳ್ಳು ಕುಣಿತ, ತಮಟೆ ಕುಣಿತ, ನಾದಸ್ವರ ವಾದ್ಯಗಳು ಜಾತ್ರೆಗೆ ಮೆರಗು ತಂದವು. ಇದೇ ವೇಳೆ ಸರಿಗಮಪ ಸೀಜನ್ 20ರ ವಿಜೇತ ದರ್ಶನ್ ನಾರಾಯಣ್ ಅವರನ್ನು ಯುವಕ ಮಂಡಳಿ ನಿರ್ದೇಶಕರು ಸನ್ಮಾನಿಸಿದರು.