

ಸಾಗರ: ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಡಿ.26ರಂದು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವಾಗ ಕೆಲ ದುಷ್ಕರ್ಮಿಗಳು ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಕೃತ್ಯ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮದ ವೇಳೆ ದೇವರಿಗೆ ಧಿಕ್ಕಾರ ಕೂಗಿ ದೊಂಬಿ ಗಲಾಟೆ ಮಾಡಿದ್ದಾರೆ. ಈ ಘಟನೆ ಅತ್ಯಂತ ಗಂಭೀರವಾಗಿದ್ದು, ಈ ಘಟನೆ ರಾಜ್ಯದ ಕೋಟ್ಯಂತರ ಭಕ್ತರು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ಬದಲು ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ಭಕ್ತರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಸರ್ಕಾರ ತಕ್ಷಣ ಉತ್ಸವ ಮೂರ್ತಿ ಅಪವಿತ್ರಗೊಳಿಸಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆನಂದ ಬಾಳೆಕೊಪ್ಪ, ಕೆ.ವಿ.ಪ್ರವೀಣ್, ಕೆ.ಎಚ್.ಸುದರ್ಶನ್, ಸಂತೋಷ್ ಶಿವಾಜಿ, ಕೃಷ್ಣಮೂರ್ತಿ, ಮೋಹನ್ ಶೇಟ್, ರವೀಶ್ ಇತರರಿದ್ದರು.