ಬೈರಾಂಬುದಿಯಲ್ಲಿ ದಸರಾ ಮಹೋತ್ಸವ

5 Dasara Utsav
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬೈರಾಂಬುದಿಯ ಶ್ರೀ ಹೊಂಗ್ಯಮ್ಮ ದೇವಿ ಹಾಗೂ ಶ್ರೀ ಮಲ್ಲಿಗಮ್ಮ ದೇವಿಯವರ ದಸರಾ ಮಹೋತ್ಸವವು ಶನಿವಾರ ತುಂತುರು ಮಳೆಯ ನಡುವೆಯೇ ವೈಭವದಿಂದ ನೆರವೇರಿತು. ಬಾಣಾವಾರ ಹೋಬಳಿ ಬೈರಾಂಬುದಿಯ ಹೊಂಗ್ಯಮ್ಮ ದೇವಿ 12 ಹಳ್ಳಿಗಳ ಬುಡಕಟ್ಟು ಸೇರಿದಂತೆ ಅಪಾರ ಭಕ್ತ ಸಮೂಹ ಹೊಂದಿರುವ ಶಕ್ತಿದೇವತೆಯಾಗಿದ್ದು, ಉತ್ಸವಕ್ಕೆ ನೂರಾರು ಭಕ್ತರು ಸಂಗಮಿಸಿದ್ದರು.

ಸದಾ ಭಕ್ತರ ಮನೆಗಳು, ಸುತ್ತಮುತ್ತಲಿನ ರಥೋತ್ಸವ ಹಾಗೂ ಉತ್ಸವಗಳಲ್ಲಿ ಭಾಗಿಯಾಗುತ್ತಿದ್ದ ಬೈರಾಂಬುದಿಯ ದೇವರ ಮೂರ್ತಿಗಳನ್ನು ಈ ಬಾರಿ ಪಟ್ಟಕ್ಕೆ ಕೂರಿಸಲಾಗಿತ್ತು. ಸಂಪ್ರದಾಯದಂತೆ ಉತ್ಸವದ ಅಂಗವಾಗಿ ಹೊಂಗ್ಯಮ್ಮ ದೇವಿ, ಮಲ್ಲಿಗೆಮ್ಮ ದೇವಿ, ಚೆಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರಿಗೆ ಸುವರ್ಣ ಆಭರಣಗಳು ಹಾಗೂ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅರೆ ವಾದ್ಯ ಸದ್ದಿನೊಂದಿಗೆ ಮೆರವಣಿಗೆ ಮಾಡಿ ನಂತರ ದೇವಿಯ ಮೂಲಸ್ಥಾನದ ಆವರಣಕ್ಕೆ ಕರೆತರಲಾಯಿತು.

ನಂತರ ಕಲ್ಯಾಣಿಯಲ್ಲಿ ಗಂಗಾ ಪೂಜೆ ಸಲ್ಲಿಸಲಾಯಿತು. ದೇವರುಗಳು, ಬಿಲ್ಲು ಬಾಣಗಳ ಪೂಜೆ ಹಾಗೂ ದಸರಾ ಮಹೋತ್ಸವ ಪೂಜಾ ವಿಧಾನಗಳು ಶ್ರದ್ಧಾಭಕ್ತಿಯಿಂದ ನಡೆದವು. ಹಸಿ ಫಲಾಹಾರ ನೈವೇದ್ಯ ಸಹಿತ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಚೆಲುವರಾಯ ಸ್ವಾಮಿಯವರ ಗಣಮಗನಾದ ಮಂಜಣ್ಣರವರು ಬಿಲ್ಲು ಬಾಣದ ಮೂಲಕ ಬಾಳೆ ಕಂದನ್ನು ಪೂಜಿಸಿದರು. ನಂತರ ಛೇದನ ಮಾಡಿದರು. ನೂರಾರು ಭಕ್ತರು ಬನ್ನಿ ಪಡೆದು ದೇವರ ದರ್ಶನ ಮಾಡಿದರು. ಚೆಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿ ಕುಣಿತವು ಜನಮನಸೂರೆಗೊಂಡಿತು.

ಹೊಂಗ್ಯಮ್ಮ ದೇವಿ ದೇಗುಲ ವ್ಯವಸ್ಥಾಪನಾ ಸಮಿತಿ ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net