ಮೈಸೂರು ಮಾರಮ್ಮನ ಉತ್ಸವ

24 HANUR 6 A
Published on

ಹನೂರು: ಪಟ್ಟಣದ ಮೈಸೂರು ಮಾರಮ್ಮ ದೇಗುಲದಲ್ಲಿ ನವರಾತ್ರಿಯ ಅಂಗವಾಗಿ ಕಳೆದ 9 ದಿನಗಳಿಂದ ಪಟ್ಟದಲ್ಲಿ ಕೂರಿಸಲಾಗಿದ್ದ ದೇವಿಯ ವಿಗ್ರಹಮೂರ್ತಿಯನ್ನು ಮಂಗಳವಾರ ಮೆರವಣಿಗೆಯ ಮೂಲಕ ಬನ್ನಿಮರದ ಸಮೀಪಕ್ಕೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹಾನವಮಿ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಅಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪಟ್ಟದಲ್ಲಿ ಕೂರಿಸಲಾಗಿತ್ತು. 10ನೇ ದಿನವಾದ ವಿಜಯದಶಮಿಯಂದು ಬೆಳಗ್ಗೆ ದೇಗುಲದಲ್ಲಿ ದೇವಿಗೆ ಹಾಲು, ಮೊಸರು, ಬೆಣ್ಣೆ, ಜೇನುತುಪ್ಪ, ಎಳನೀರು, ಪನ್ನೀರು, ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಮಹಾಮಂಗಳಾರತಿ ಬೆಳಗಲಾಯಿತು. ಮಧ್ಯಾಹ್ನ 2.30ರಲ್ಲಿ ಅಮ್ಮನವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ಬಳಿಕ ಹಳೇ ಎಂಡಿಸಿಸಿ ರಸ್ತೆ, ಬಸ್ ನಿಲ್ದಾಣ, ಬಂಡಳ್ಳಿ ರಸ್ತೆ, ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಬನ್ನಿಮಂಟಪ ಬಡಾವಣೆಯಲ್ಲಿರುವ ಬನ್ನಿಮರಕ್ಕೆ ಮೆರವಣಿಗೆ ಮೂಲಕ ಕರೆದೊಯ್ದು ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರದಿದ್ದರು. ಮೆರವಣಿಗೆಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಆಗಮಿಸಿ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಅಮ್ಮನವರ ಉತ್ಸವ ಮೂರ್ತಿಯನ್ನು ದೇಗುಲಕ್ಕೆ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net