ಧರ್ಮನಿಷ್ಠ ನಡೆ-ನುಡಿಯಿಂದ ರಾಮರಾಜ್ಯ ನಿರ್ಮಾಣ

20gkn1-a- RAGHAVESHWAR SHRRE
Published on

ಗೋಕರ್ಣ: ನಮ್ಮ ನಡೆ, ನುಡಿ ಧರ್ಮನಿಷ್ಠವಾಗಿ ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆದಾಗ ಸಮಸ್ತ ದೇಶ ಸಹಜವಾಗಿ ರಾಮರಾಜ್ಯವಾಗುತ್ತದೆ. ಕಾರಣ ಧರ್ಮಮಾರ್ಗವನ್ನು ಎಳೆವೆಯಲ್ಲಿಯೇ ರೂಢಿಸಿಕೊಳ್ಳುವಂತಾಗಬೇಕು ಎಂದು ಸಂಘಟನಾ ಚಾತುರ್ವಸ್ಯ ವ್ರತನಿಷ್ಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಮೈಸೂರು, ಚಿಕ್ಕಮಗಳೂರು, ಹಾಸನ, ತುಮಕೂರು ಮತ್ತು ಚಿತ್ರದುರ್ಗ ವಲಯಗಳ ಶ್ರೀ ಗುರುಭಿಕ್ಷಾ ಸೇವೆಯನ್ನು ಭಾನುವಾರ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಧರ್ಮ ಎನ್ನುವುದು ಬಹು ಸೂಕ್ಷ್ಮ ಸಂವೇದನೆ. ಇದನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವುದು ಕಷ್ಟಕರ ಪ್ರಯತ್ನ. ಧರ್ಮದ ಪರಿಕಲ್ಪನೆ ಮತ್ತು ಧರ್ಮ ಶಬ್ದಕ್ಕೆ ಭಾರತೀಯ ಸಂಸ್ಕೃತಿ ಬಿಟ್ಟು ಬೇರೆಲ್ಲಿಯೂ ಪರ್ಯಾಯ ಶಬ್ದವಿಲ್ಲ. ಹೀಗಾಗಿ ಧರ್ಮ ಸಾಕ್ಷಾತ್ಕಾರ ಆಗಿರುವುದು ಭಾರತೀಯರಿಗೆ ಮಾತ್ರ. ಧರ್ಮವನ್ನು ಸರಳ ರೂಪದಲ್ಲಿ ಹೇಳಬೇಕೆಂದರೆ ಸರಿಯಾದುದನ್ನು ಮಾಡುವುದು ಧರ್ಮ. ತಪ್ಪು ಮಾಡುವುದು ಅಧರ್ಮ. ಧರ್ಮ ನಮ್ಮನ್ನು ಜೀವನದ ಪರಮೋಚ್ಛ ಗುರಿ ಸೇರಿಸುವ ಸಾಧನವಾದರೆ, ಅಧರ್ಮ ನಮ್ಮನ್ನು ಸರಿಯಾದ ಗುರಿಯಿಂದ ವಿಮುಖವಾಗಿಸುತ್ತದೆ. ಧರ್ಮ ಮಾತ್ರ ನಮ್ಮನ್ನು ದೇವರತ್ತ ಒಯ್ಯುತ್ತದೆ. ಕಾರಣ ಜೀವನದಲ್ಲಿ ನಮ್ಮನ್ನು ನಾವು ಸರಿದಾರಿಯಲ್ಲಿ ನಡೆಯುವಂತೆ ಮಾಡಿಕೊಂಡಲ್ಲಿ ಸಮಾಜದಲ್ಲಿ ಒಬ್ಬ ಕೆಟ್ಟವ ಕಡಿಮೆಯಾದಂತೆ. ಇದೇ ದೇಶ ರಾಮರಾಜ್ಯ ಆಗುವುದಕ್ಕೆ ಭದ್ರ ಬುನಾದಿಯಾಗಲಿದೆ ಎಂದು ವಿಶ್ಲೇಷಿಸಿದರು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದ ಹಿರಿಯ ಗಾಯಕ ಡಾ. ಅಶೋಕ ಹುಗ್ಗಣ್ಣವರ ಅವರನ್ನು ಶ್ರೀಗಳು ವಿಶೇಷ ಸನ್ಮಾನವಿತ್ತು ಆಶೀರ್ವದಿಸಿದರು.

ಮುಕ್ರಿ ಸಮಾಜದ ಪ್ರಮುಖ ಎನ್.ಆರ್. ಮುಕ್ರಿ ಮಾತನಾಡಿದರು. ಮುಕ್ರಿ ಸಮಾಜದಲ್ಲಿ ಗಣನೀಯ ಸೇವೆಯನ್ನಿತ್ತ ಎನ್.ಆರ್. ಮುಕ್ರಿ, ಪರಮೇಶ್ವರ ಮುಕ್ರಿ, ಅಣ್ಣಪ್ಪ ತುಳಸು ಮುಕ್ರಿ, ಹನುಮಂತ ಮುಕ್ರಿ ಭಾಸ್ಕೇರಿ, ದತ್ತಾತ್ರೇಯ ಬೀರ ಮುಕ್ರಿ ಮತ್ತು ನಾಗಪ್ಪ ಮುಕ್ರಿ ಹೊನಲಗದ್ದೆ ಅವರನ್ನು ಶ್ರೀಗಳು ಸಾಧಕ ಸನ್ಮಾನವಿತ್ತು ಆಶೀರ್ವದಿಸಿದರು.

ಹಾಂಗ್ಯೋ ಐಸ್ಕ್ರೀಂ ಮಾಲೀಕ ಪ್ರದೀಪ ಪೈ ಶ್ರೀಗಳಿಂದ ಆಶೀರ್ವಾದ ಪಡೆದರು. ಚಾತುರ್ವಸ್ಯ ಸಮಿತಿ ಅಧ್ಯಕ್ಷ ಯು.ಎಸ್. ಗಣೇಶ ಭಟ್ಟ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ವ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಮುಖ್ಯ ಶಿಕ್ಷಕಿ ಸೌಭಾಗ್ಯ ಭಟ್ಟ, ಹಿರಿಯ ಸೇವಾಕರ್ತರಾದ ಕೆ.ಎನ್. ಹೆಗಡೆ, ಅರವಿಂದ ದರ್ಭೆ, ಇತರರಿದ್ದರು. ವಿನಾಯಕ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net