

ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗುತ್ತದೆ ಎಂದು ಒಕ್ಕಲಿಗ ಯುವ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಹೇಳಿದರು.
ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ 4ಬಿ ಕಂಪನಿ 13 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಹಾಗೂ 01/4 ಕರ್ನಾಟಕ ಏರ್ ಸ್ಕ್ವಾಡ್ರ್ಯನ್ ಎನ್‌ಸಿಸಿ ವತಿಯಿಂದ ಶನಿವಾರ ಆಯೋಜಿಸಿದ್ದ ಯುಪಿಎಸ್‌ಸಿ, ಸಿಡಿಎಸ್, ಎಎಫ್‌ಸಿಎಟಿ, ಎಸ್‌ಎಸ್‌ಬಿ ಪರೀಕ್ಷಾ ಆಕಾಂಕ್ಷಿಗಳಿಗೆ ಸಂದರ್ಶನ ಪ್ರಕ್ರಿಯೆಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಎಲ್ಲ ಕ್ಷೇತ್ರದಲ್ಲೂ ಆರೋಗ್ಯಕರ ಸ್ಪರ್ಧೆ ನಡೆಸಬೇಕಾಗಿದೆ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗಿರುವುದು ಅನಿವಾರ್ಯ. ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಆರಂಭದಲ್ಲಿ ಇದ್ದ ಆಸಕ್ತಿ, ಸ್ಪರ್ಧಾ ಮನೋಭಾವ ಇವೆಲ್ಲವೂ ಕಾಲಕ್ರಮೇಣ ಕಡಿಮೆಯಾಗುತ್ತದೆ. ಕಲಿಕಾ ವಾತಾವರಣ ಕೊರತೆ, ನಿತ್ಯಜೀವನದ ಅಡೆತಡೆಗಳು, ಸೂಕ್ತ ಮಾಹಿತಿ ಇಲ್ಲದಿರುವುದು, ವಿಷಯ ಕ್ರೋಡೀಕರಣಕ್ಕೆ ಸಮಯದ ಅಭಾವ, ಸಿದ್ಧತೆಗೆ ಯೋಜನೆ ಇಲ್ಲದಿರುವಿಕೆ ಹಾಗೂ ಬಹುಮುಖ್ಯವಾಗಿ ಪ್ರಶ್ನೆಯ ವಿಧ ಹಾಗೂ ಅವುಗಳನ್ನು ಬಿಡಿಸುವ ವಿಧಾನ ತಿಳಿಯದೇ ಇರುವುದು ಕಾರಣವಾಗಿದೆ ಎಂದು ಹೇಳಿದರು.
ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಪ್ರತಿ ಹಂತದಲ್ಲೂ ಅಧ್ಯಯನ ಯೋಜನೆ ಮತ್ತು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು. ಆಗ ಯಾವುದೇ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಬೇಕು. ಹಾಗಾಗಿ ಪರಿಶ್ರಮ ಇರಬೇಕು ಎಂದರು.
ನಗರದ ಅಲ್ಫಾ ಲೀಡ್ ಅಕಾಡೆಮಿಯ ಸಂಸ್ಥಾಪಕ, ನಿವೃತ ಗ್ರೂಫ್ ಕ್ಯಾಪ್ಟನ್ ಅಭಿನವ್ ಚತುರ್ವೇದಿ ಮಾತನಾಡಿ, ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಂಯೋಜಿತ ರಕ್ಷಣಾ ಸಿಬ್ಬಂದಿ ಪರೀಕ್ಷೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ , ಆಫ್ ಕ್ಯಾಟ್ ಪರೀಕ್ಷೆ ಮತ್ತು ಅಗ್ನಿವೀರ್ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಲ್ ಎಸ್‌ಜೆಎಸ್ ಸರ್ದಾರ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಕಾಲೇಜಿನ ಸಿಇಒ ಡಾ.ರಮೇಶ್, ಎನ್‌ಸಿಸಿ ಫ್ಲೈಯಿಂಗ್ ಆಫೀಸರ್ ಡಾ. ಪುಷ್ಪರಾಣಿ, ಎನ್‌ಸಿಸಿ ಅಧಿಕಾರಿ ಡಾ.ಗಾಯತ್ರಿ, ಕಾರ್ಯಕ್ರಮದ ಆಯೋಜಕ ಮಣಿಕಂಠ ಇದ್ದರು.