ಕೇಂದ್ರ ಪುರಸ್ಕೃತ ಅನುದಾನ ಸಮರ್ಪಕವಾಗಿ ಬಳಸಿ

Utilize centrally awarded grants adequately
ವಿಜಯಪುರದ ಜಿಪಂ ಸಭಾಂಗಣದಲ್ಲಿ ಸಂಸದ ರಮೇಶ ಜಿಗಜಿಣಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ 1ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಪಂ ಸಿಇಒ ರಾಹುಲ್ ಶಿಂಧೆ ಇದ್ದಾರೆ.
Published on

ವಿಜಯಪುರ: ಕೃಷಿ, ಗ್ರಾಮೀಣಾಭಿವೃದ್ಧಿ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಸದ ರಮೇಶ ಜಿಗಜಿಣಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ 1ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಪುರಸ್ಕೃತ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು. ಜಲಜೀವನ ಮಿಷನ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು.

ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ರಸ್ತೆಯನ್ನು ಕಾಮಗಾರಿ ಪೂರ್ಣಗೊಂಡ ನಂತರ ಹಾಗೆ ಬಿಡದೇ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಂದಲೇ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು.

ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ನಂತರವೇ ಟೆಂಡರ್‌ದಾರರಿಗೆ ಹಣ ಪಾವತಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಹಳ್ಳಿಗಳಲ್ಲಿನ ರಸ್ತೆ ಬದಿಯ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಅಥವಾ ನಗರ ಪ್ರದೇಶದ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು.

ಜಲಧಾರೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಬಹುಹಳ್ಳಿ ಕುಡಿಯುವ ನೀರಿನ ಯೊಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆಗಳಲ್ಲಿ ಬೋರವೆಲ್‌ಗಳ ಅವಶ್ಯಕತೆ ಇದ್ದಲ್ಲಿ ಬೋರವೆಲ್ ಕೊರೆಯಿಸಲು ಕ್ರಮ ವಹಿಸಿ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಜಲ ಜೀವನ ಮಿಷನ್ ಯೋಜನೆಯಡಿಯ 848 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 234 ಕಾಮಗಾರಿಗಳು ಪ್ರಗತಿಯಲ್ಲಿದ್ದು, 471 ಕಾಮಗಾರಿಗಳು ಪೂರ್ಣಗೊಂಡಿವೆ.

ಶೇ.58.82 ರಷ್ಟು ಪ್ರಗತಿ ಸಾಧಿಸಲಾಗಿದ್ದು, 266.86 ಲಕ್ಷ ರೂ. ವೆಚ್ಚ ಮಾಡಲಾಗಿದೆ. 2024ನೇ ಡಿಸೆಂಬರ್ ಒಳಗಾಗಿ ಬಾಕಿ ಉಳಿದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ ಯೋಜನೆಯಡಿ 761 ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ. ಇದರಲ್ಲಿ 138 ಹೃದಯ ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದು, ಮಿದುಳು ಶಸ್ತ್ರ ಚಿಕಿತ್ಸೆ ಪ್ರಕರಣಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಲಜೀವನ ಮಿಷನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net