ಕಾರ್ಯಕ್ರಮ ರೂಪಿಸಲು ಪಿಂಚಣಿ ಹಣ ವಿನಿಯೋಗ

29
Published on

ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಬುಧವಾರ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ತಗಡೂರು ಗೌರಿಶಂಕರ್ ಪುಣ್ಯಸ್ಮರಣೆ ಆಚರಿಸಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬರುತ್ತಿದ್ದ ತಗಡೂರು ಗೌರಿಶಂಕರ್ ಅವರು, ಸ್ವಂತ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದರು. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಬರುತ್ತಿದ್ದ ಪಿಂಚಣಿ ಹಣವನ್ನು ಕಾರ್ಯಕ್ರಮಗಳನ್ನು ಸಂಘಟಿಸಲು ವಿನಿಯೋಗಿಸುತ್ತಿದ್ದರು ಎಂದರು.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷ ಎಚ್.ಎಲ್.ಯಮುನಾ ಮಾತನಾಡಿ, ಸಾಂಸ್ಕೃತಿಕ, ಕಲಾ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡವರು ಗೌರಿಶಂಕರ್. ಎಲೆಮರೆಯ ಕಾಯಂತಿದ್ದವರನ್ನು ನಗರಕ್ಕೆ ಆಹ್ವಾನಿಸಿ ಅವರಿಂದ ಕಾರ್ಯಕ್ರಮ ರೂಪಿಸುತ್ತಿದ್ದರು. ಅನೇಕರಿಗೆ ವೇದಿಕೆ ಕಲ್ಪಿಸಿ ಬೆಳೆಯಲು ಸಹಕಾರ ನೀಡುತ್ತಿದ್ದರು ಎಂದು ಹೇಳಿದರು.

ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಲಯನ್ಸ್ ಸಂಸ್ಥೆಯ ಸುರೇಶ್(ಗೋಲ್ಡ್), ಮುಖಂಡರಾದ ದ್ಯಾವಪ್ಪನಾಯಕ, ಕೃಷ್ಣಮೂರ್ತಿ, ಪ್ರಮೀಳಾ, ನಾಗಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net