ವಿಜಯಪುರದ ಸರ್ವಾಂಗೀಣ ಪ್ರಗತಿಗೆ ಸಂಸದರ ನಿಧಿ ಬಳಕೆ; ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ

SUDHAMURTI MEETING
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಇದ್ದಾರೆ.
Published on

ವಿಜಯಪುರ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡುವುದಾಗಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗೋಳಗುಮ್ಮಟ, ಬಾರಾ ಕಮಾನ್, ಗಗನ ಮಹಲ್, ಇಬ್ರಾಹಿಮ್ ರೋಜಾ, ಬಸವನ ಬಾಗೇವಾಡಿ ಹಾಗೂ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಸ್ವಚ್ಚತೆ ಕಲ್ಪಿಸಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಗೃಹ, ಮಾಹಿತಿ ಕೇಂದ್ರ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲಾಗುವುದು. ಅದಕ್ಕಾಗಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಬಳಸಲಾಗುವುದು ಎಂದರು.

ವಿಜಯಪುರ ನಗರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಸಮಗ್ರ ಅಭಿವೃದ್ದಿಗೆ ಕ್ರಮ ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಜನರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಬೇಕು ಎಂದರು.

ಕುಮಟಗಿಯಲ್ಲಿರುವ ವಾಟರ್‌ಪೆವಿಲಿಯನ್‌ನ್ನು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಅಲ್ಲಿನ ಕೆರೆಯ ಸಂರಕ್ಷಣೆ ಹಾಗೂ ಅರಮನೆ, ಕೋಟೆಯನ್ನು ಪ್ರೇಕ್ಷಣಿಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಅಗತ್ಯ ಸಹಕಾರ ಒದಗಿಸಬೇಕು ಎಂದು ಹೇಳಿದರು.

ಶಾಲೆ, ಅಂಗನವಾಡಿ, ಹಾಸ್ಟೇಲ್‌ಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಿ ಸಮಪರ್ಕವಾಗಿ ನಿರ್ವಹಣೆ ಮಾಡಬೇಕು. ಆರೋಗ್ಯ ಹಾಗೂ ವ್ಯಯಕ್ತಿಕ ಸ್ಚಚ್ಚತೆಯ ಬಗ್ಗೆ ತಿಳಿವಳಿಕೆ ಮೂಡಿಸಿ ಶೌಚಗೃಹ ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುವಂತೆ, ಗ್ರಂಥಾಲಯದ ಅನುಕೂಲ, ವ್ಯಕ್ತಿತ್ವ ವಿಕಸನ, ಈಜು, ಕ್ರೀಡೆಯಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಸಂಸದರ ಪ್ರದೇಶಾಭಿವೃದ್ಧಿ ಯೋಜನೆಗೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡುವುದಾಗಿಯೂ, ಜಿಲ್ಲಾ ವ್ಯಾಪ್ತಿಯಲ್ಲಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಡಿಎಚ್‌ಒ ಡಾ. ಬಸವರಾಜ ಹುಬ್ಬಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಹಿಂದುಳಿದ ಕಲ್ಯಾಣ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ, ಪ್ರಮಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net