ಯುಟಿಲಿಟಿ ರೆಸ್ಟೋರೆಂಟ್ ಗುತ್ತಿಗೆ ರದ್ದು

utility bulding
Published on

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿರುವ ಪಾಲಿಕೆಯ ನೇತಾಜಿ ಸುಭಾಷ್​ಚಂದ್ರ ಬೋಸ್ ಪಬ್ಲಿಕ್ ಯುಟಿಲಿಟಿ‘ಕಟ್ಟಡದ ಒಂದು ಭಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಿಕೊಡುವ ಯತ್ನಕ್ಕೆ ಪಾಲಿಕೆ ಬ್ರೇಕ್ ಹಾಕಿದೆ.

ಮೆ. ಕೆನೊಪಿ ರೆಸ್ಟೋರೆಂಟ್​ಗೆ ನೀಡಿದ ಗುತ್ತಿಗೆ ನವೀಕರಿಸುವುದರಿಂದ ನಷ್ಟವಾಗುತ್ತದೆ. ಆದ್ದರಿಂದ, ಅದನ್ನು ರದ್ದುಪಡಿಸಿ ಸ್ವತ್ತನ್ನು ವಶಕ್ಕೆ ಪಡೆದು ಮರುಟೆಂಡರ್ ಮೂಲಕ ಗುತ್ತಿಗೆ ನೀಡಬೇಕು ಎಂದು ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ‘ಬಾಡಿಗೆ ಹೆಚ್ಚಳ ನೆಪದಲ್ಲಿ ಆಸ್ತಿ ಪರಭಾರೆ’ ಎಂಬ ಶೀರ್ಷಿಕೆಯಲ್ಲಿ 2019ರ ಡಿ.3ಕ್ಕೆ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಚದರಡಿಗೆ 65 ಪೈಸೆ ಬಾಡಿಗೆ: ಬೆಂಗಳೂರಿನ ವಸತಿ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆಯಲು ಚದರಡಿಗೆ 10-15 ರೂ. ಮಾಸಿಕ ಬಾಡಿಗೆ ಕೊಡಬೇಕಾಗುತ್ತದೆ. ಆದರೆ ವಾಣಿಜ್ಯ ಚಟುವಟಿಕೆಯ ಕೇಂದ್ರವಾದ ಎಂ.ಜಿ. ರಸ್ತೆಯಲ್ಲಿರುವ ಕಟ್ಟಡದಲ್ಲಿ ಚದರಡಿಗೆ 65 ಪೈಸೆಯಂತೆ ಗುತ್ತಿಗೆಗೆ ನೀಡಲಾಗಿತ್ತು. ಬಿಬಿಎಂಪಿ ಒಡೆತನದಲ್ಲಿರುವ ಈ ಕಟ್ಟಡದ 2ನೇ ಅಂತಸ್ತಿನಲ್ಲಿ 22,975 ಚದರಡಿ ಸ್ಥಳಕ್ಕೆ ಪಾಲಿಕೆ ಮಾಸಿಕ ಕೇವಲ 14,836 ರೂ. ಬಾಡಿಗೆ ಬರುತ್ತಿತ್ತು.

1977ರಲ್ಲಿ 4 ವರ್ಷದ ಅವಧಿಗೆ ಒಪ್ಪಂದ ಮಾಡಿ ಕೊಳ್ಳಲಾಗಿದ್ದರೂ, ನಂತರದಲ್ಲಿ ಅಧಿಕಾರಿಗಳು ಅತ್ತ ಸುಳಿದಿರಲಿಲ್ಲ. ಹಂತಹಂತವಾಗಿ 7 ಬಾರಿ ಬಾಡಿಗೆ ಹೆಚ್ಚಿಸಿದರೂ 2003ರವರೆಗೆ 14,836 ರೂ.ದಾಟಿರಲಿಲ್ಲ.

ನವೀಕರಿಸಲು ಟಿಪ್ಪಣಿ: ಯುಟಿಲಿಟಿ ಕಟ್ಟಡದಲ್ಲಿಯೇ ಇದ್ದ ಸರ್ಕಾರಿ ಕಚೇರಿಗೆ ಮಾಸಿಕ 10 ರೂ. ಚದರಡಿಗೆ ಬಾಡಿಗೆಗೆ ನೀಡಿದ್ದರೂ ಈ ರೆಸ್ಟೋರೆಂಟ್​ಗೆ ಮಾತ್ರ 65 ಪೈಸೆ ಬಾಡಿಗೆ ಮುಂದುವರಿದಿತ್ತು. ಇದನ್ನು ಪರಿಶೀಲಿಸಿದ್ದ ತೋಟಗಾರಿಕೆ ಮತ್ತು ಮಾರುಕಟ್ಟೆ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ

ಸಮಿತಿಗಳು ಬಾಡಿಗೆ ನವೀಕರಿಸಲು ಟಿಪ್ಪಣಿ ಮಂಡಿಸಿ ದ್ದವು. ಲೆಕ್ಕ ಹಾಕಿ ಮಾಸಿಕ ಸರಾಸರಿ 11 ರೂ.ನಂತೆ 2,58,458 ರೂ. ಬಾಡಿಗೆ ನಿಗದಿಪಡಿಸಿ 5 ವರ್ಷಕ್ಕೆ ಗುತ್ತಿಗೆ ನವೀಕರಿಸಬಹುದು ಎಂದು ಶಿಫಾರಸು ಮಾಡಿದ್ದವು.

ಬದಲಾಯಿತು ಮಾರ್ಗ!

ತೋಟಗಾರಿಕೆ ಮತ್ತು ಮಾರುಕಟ್ಟೆ ಸ್ಥಾಯಿ ಸಮಿತಿ ಹಾಗೂ ತೆರಿಗೆ ಮತ್ತು ಆರ್ಥಕ ಸ್ಥಾಯಿ ಸಮಿತಿಗಳ ಜಂಟಿ ಸಭೆಯಲ್ಲಿ ಬಾಡಿಗೆ ಮೊತ್ತವನ್ನು ನವೀಕರಿಸುವ ಮಾರ್ಗವನ್ನೇ ಬದಲಾಯಿಸಲಾಗಿತ್ತು. ಬಾಡಿಗೆ ಒಪ್ಪಿತವಾದರೂ, ಬಾಡಿಗೆ ನೀಡಿದ ಕಟ್ಟಡವನ್ನು ಶಾಶ್ವತವಾಗಿ ಪರಭಾರೆ ಮಾಡುವಂತಹ ನಿರ್ಧಾರ ಕೈಗೊಳ್ಳಲಾಗಿತ್ತು. ‘ಮುಂದಿನ ಪ್ರತಿ ಐದು ವರ್ಷಕ್ಕೊಮ್ಮೆ ಶೇ.25 ಬಾಡಿಗೆ ಹೆಚ್ಚಳ ಮಾಡಿ, ಗುತ್ತಿಗೆ ಅವಧಿಯನ್ನು ನವೀಕರಿಸುವುದು’ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಇದರಿಂದ ಬಾಡಿಗೆ ನೀಡಿರುವ ಭಾಗವು ಶಾಶ್ವತವಾಗಿ ಒಬ್ಬರ ಪಾಲಾಗಿ ಬಿಬಿಎಂಪಿ ನಿಯಂತ್ರಣ ಇಲ್ಲವಾಗಲಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆತಂಕ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net