

ವಿಜಯವಾಣಿ ಸುದ್ದಿಜಾಲ ಧಾರವಾಡ
ರೆ. ಉತ್ತಂಗಿ ಚನ್ನಪ್ಪನವರ ನೆನಹು ಸಮಸ್ತ ಕನ್ನಡಿಗರಿಗೆಲ್ಲಾ ಉದಯಕಾಲ. ಅವರು ಕನ್ನಡ ನಾಡು ಕಂಡ ಒಬ್ಬ ಸರ್ವಶ್ರೇಷ್ಠ ಅನುಭಾವಿಗಳು ಎಂದು ನಿವೃತ್ತ ಪ್ರಾಚಾರ್ಯ ಡಾ. ಆರ್. ಬಿ. ಚಿಲುಮಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ರೆ. ಉತ್ತಂಗಿ ಚನ್ನಪ್ಪನವರ ದತ್ತಿ ಕಾರ್ಯಕ್ರಮದಲ್ಲಿ ಚನ್ನಪ್ಪನವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದರು.
ರೆ. ಉತ್ತಂಗಿ ಚನ್ನಪ್ಪನವರು ಕನ್ನಡ ನಾಡಿನಲ್ಲಿ ಹುಟ್ಟಿ ಕ್ರೈಸ್ತ ಸಮಾಜದಲ್ಲಿ ಬೆಳೆದು, ಕಷ್ಟಪಟ್ಟು ಕನ್ನಡತನ ಉಳಿಸಿದ್ದಾರೆ. ಅವರು ಲಿಂಗಾಯತ ಧರ್ಮ ಕುರಿತು ಸುಮಾರು ಎಂಟು ಕೃತಿ, ಕ್ರೈಸ್ತ ಸಮಾಜ ಕುರಿತು ಐದು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. 2 ಧರ್ಮಗಳ ನಡುವಿನ ಪ್ರೀತಿಯ ಸೇತುವೆಯಾದರು. ಸರಳತೆಯ ಚನ್ನಪ್ಪನವರಲ್ಲಿ ಯೇಸು ಸ್ವಾಮಿಯಲ್ಲಿದ್ದ ಅಪಾರ ಕ್ಷಮಾಗುಣ ಹಾಗೂ ಇತರರನ್ನು ಪ್ರೀತಿಸುವ ಗುಣಗಳಿದ್ದವು ಎಂದರು.
ಹಿರಿಯ ವಿಮರ್ಶಕ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಶ್ರೀನಿವಾಸ ದೇಸಾಯಿ ಅವರ ಸರ್ವಜ್ಞನ ನೂರೊಂದು ವಚನಗಳು ಹಾಗೂ ಡಾ. ಎಸ್. ಆರ್. ಗುಂಜಾಳರ ನನ್ನ ಆತ್ಮ ಚರಿತೆ ಎರಡು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಸರ್ವಜ್ಞನ ನೂರೊಂದು ವಚನಗಳ ಕೃತಿಯಲ್ಲಿ ಕನ್ನಡದ ಜತೆಗೆ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ ಭಾಷೆಯಲ್ಲೂ ವ್ಯಾಖ್ಯಾನ ಮಾಡಿದ್ದು ಶ್ಲಾಘನೀಯ. ಈ ಅನುವಾದ ಎಲ್ಲ ಭಾಷಿಕರಿಗೂ ಅನುಕೂಲವಾಗುವ ಕೃತಿಯಾಗಿದೆ ಎಂದರು.
ರೆ. ಎಸ್.ಎಸ್. ಸಕ್ರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಆರ್. ಗುಂಜಾಳ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ನಿಂಗಣ್ಣ ಕುಂಟಿ, ನರಸಿಂಹ ಪರಾಂಜಪೆ, ರಾಮಚಂದ್ರ ಧೋಂಗಡೆ, ಎಸ್.ಎಸ್. ಹಿರೇಮಠ, ಸದಾಶಿವ ಜನಗೌಡರ, ಮಹಾಂತೇಶ ನರೇಗಲ್, ಸಿದ್ದಣ್ಣ ಕಂಬಾರ, ಡಾ. ಮಂಜುಳಾ ಛಲವಾದಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.