ಸೈಬರ್ ಅಪರಾಧ ಪತ್ತೆಗೆ ಎಐ ಬಳಕೆ

HUN-FEB-25-4(CHAYADEVE COLLEGE PROGRAMME)
ಹುಣಸೂರು ನಗರದ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮುನಿಯಪ್ಪ ಮಾತನಾಡಿದರು. ಸಿದ್ದರಾಮಯ್ಯ ಇತರರು ಇದ್ದರು.
Published on

ಹುಣಸೂರು: ಸೈಬರ್ ಅಪರಾಧಗಳ ಪತ್ತೆಗೆ ಕೃತಕ ಬುದ್ಧಿಮತ್ತೆ(ಎಐ)ಯಂತಹ ನೂತನ ತಂತ್ರಜ್ಞಾನ ಬಳಸಲಾಗುತ್ತಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಗ್ರಾಮಾಂತರ ಠಾಣೆ ಇನ್‌ಸ್ಪೆೆಕ್ಟರ್ ಮುನಿಯಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಸಂಚಾರಿ ನಿಯಮಗಳು ಮತ್ತು ವಿದ್ಯಾರ್ಥಿಗಳು’ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಚಾರ ನಿಯಮ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಸಂಚಾರ ನಿಯಮ ಉಲ್ಲಂಘನೆಯೇ ಹೆಮ್ಮೆ ಎನ್ನುವಂತಹ ಮನೋಭಾವ ವಿದ್ಯಾರ್ಥಿಗಳು ತೊರೆಯಬೇಕು ಎಂದರು.

ಪ್ರಸ್ತುತ ಮೊಬೈಲ್ ದುರ್ಬಳಕೆ ನಿಲ್ಲಬೇಕಿದೆ. ಮೊಬೈಲ್ ಮೂಲಕ ಸೈಬರ್ ಕ್ರೈಂಗಳ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಯುವಸಮೂಹ ಕಾನೂನಿನ ಕಪಿಮುಷ್ಠಿಗೆ ಸಿಲುಕಿ ನಲುಗುವಂತಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಹೊರುತಪಡಿಸಿ ಇನ್ಯಾವುದೇ ವಿಷಯಗಳ ಕುರಿತು ಗಮನಹರಿಸುವುದನ್ನು ನಿಲ್ಲಿಸಬೇಕು. ಪ್ರೀತಿ, ಪ್ರೇಮ ಎಂದು ಮುಂದಡಿಯಿಟ್ಟಲ್ಲಿ ಪೋಕ್ಸೋ ಕಾಯ್ದೆ ಭವಿಷ್ಯಕ್ಕೆ ಅಡ್ಡಗಾಲಾಗಲಿದೆ. ಜೀವನ ರೂಪಿಸಿಕೊಳ್ಳುವ ಸಮಯದಲ್ಲಿ ದುರ್ವತನೆ, ದುಶ್ಚಟಗಳಿಗೆ ಒಳಗಾಗಿ ಭವಿಷ್ಯವನ್ನೇ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮಯ್ಯ, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net