

ಕುಷ್ಟಗಿ: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಡಿ.19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎನ್‌ಪಿಎಸ್ ನೌಕರರ ಮಾಡು ಇಲ್ಲವೇ ಮಡಿ ಹೋರಾಟದ ಸಂಕಲ್ಪ ಯಾತ್ರೆ ಸೋಮವಾರ ಪಟ್ಟಣ ತಲುಪಿತು. ಪ್ರತಿಭಟನೆ ನಡೆಸಿದ ನೌಕರರು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರಗೆ ಮನವಿ ಸಲ್ಲಿಸಿದರು.
ಪಟ್ಟಣದ ವೀರಯೋಧ ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಸಮಾವೇಶಗೊಂಡ ನೌಕರರನ್ನು ಉದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜ್ ಮಾತನಾಡಿ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಯೋಜನೆ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೂ ಹಳೇ ಯೋಜನೆ ಮುಂದುವರಿಸುವಂತೆ ಹೋರಾಟ ಮಾಡುತ್ತ ಬರಲಾಗಿದೆ. ಸರ್ಕಾರ ಸ್ಪಂದಿಸದ್ದರಿಂದ ಸದ್ಯ ಮಾಡು ಇಲ್ಲವೇ ಮಡಿ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಡಿ.19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಎನ್‌ಪಿಎಸ್ ನೌಕರರೆಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದರು.
ಮನವಿ ಸ್ವೀಕರಿಸಿದ ಶಾಸಕ ಅಮರೇಗೌಡ ಪಾಟೀಲ್ ಮಾತನಾಡಿ, ಎನ್‌ಪಿಎಸ್ ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದೆ. ಈ ಸಂಬಂಧ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಣವರ್, ಚಂದ್ರಕಾಂತ ತಳವಾರ್, ಜಿಲ್ಲಾಧ್ಯಕ್ಷ ಮುತ್ತು ಕಳಸಗೊಂಡ, ಪ್ರಧಾನ ಕಾರ್ಯದರ್ಶಿ ರುದ್ರೇಶ ಬೂದಿಹಾಳ, ತಾಲೂಕು ಅಧ್ಯಕ್ಷ ಶಿವಪ್ಪ ವಾಗ್ಮೋರೆ ಇತರರಿದ್ದರು.
ಕನಕಗಿರಿ: ರಾಜ್ಯ ಸರ್ಕಾರಿ ನೌಕರರಿಗೆ ಕಂಟಕವಾಗಿರುವ ಎನ್‌ಪಿಎಸ್ ರದ್ದತಿಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಾಂತಾರಾಮ್ ತೇಜ್ ಹೇಳಿದರು. ಎನ್‌ಪಿಎಸ್ ನೌಕರರ ಸಂಕಲ್ಪ ಯಾತ್ರೆ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ 21 ಜಿಲ್ಲೆಗಳಲ್ಲಿ ಯಾತ್ರೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ರಾಜ್ಯವೇ ಸುತ್ತಲಿದೆ. ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಬೆಂಗಳೂರಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಹಮ್ಮಿಕೊಂಡಿದ್ದು, ನೌಕರರು ರಜೆ ಲೆಕ್ಕಿಸದೆ ಹೋರಾಟದಲ್ಲಿ ಪಾಲ್ಗೊಂಡರೆ ಬೇಡಿಕೆ ಈಡೇರಲು ಸಾಧ್ಯ ಎಂದು ತಿಳಿಸಿದರು. ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಎಸ್.ಐ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಹೆಳವರ, ನೌಕರರಾದ ಚೇತನಕುಮಾರ, ಮಂಜು ಕೆ.ಎಲ್, ಧನಂಜಯ ಹೊಸಪೇಟೆ, ಸಂತೋಷ, ಮಹಾಂತೇಶ ರಕ್ಕಸಗಿ, ಮಂಜುನಾಥ ಹಾಸಗಲ್, ಶಂಶಾದ್‌ಬೇಗಂ, ರಾಮಚಂದ್ರ ಮಾಕಣ್ಣವರ್, ಹೇಮಾವತಿ ರಾಠೋಡ್, ಗೀತಾ ಅಂಬೋರೆ ಇತರರಿದ್ದರು.