ನಾಲ್ಕಾಣೆ ಬುದ್ಧಿ ಬಳಸಿದರೆ ಡಬಲ್ ನೊಬೆಲ್!

Nobel_Prize
Published on

ಮೈಸೂರು: ವಿಜ್ಞಾನ ಊಹಿಸದಷ್ಟು ಅಗಾಧ ಶಕ್ತಿ ನಮ್ಮೊಳಗಡೆ ಇದೆ. ಅದನ್ನು ಜಾಗೃತಗೊಳಿಸಿದರೆ ಸಾಧನೆಯ ಶಿಖರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ನಾಲ್ಕಾಣೆ ಬುದ್ಧಿ ಉಪಯೋಗಿಸಿದರೆ ಎರಡು ನೋಬೆಲ್ ಪ್ರಶಸ್ತಿ ಪಡೆಯಬಹುದು. ಹಾಗಾದರೆ ಶೇ.100ರಷ್ಟು ಬುದ್ಧಿ ಬಳಸಿಕೊಂಡರೆ ಎಂಟು ನೊಬೆಲ್ ಪಡೆಯಬಹುದು. ಈ ಅವಕಾಶ ಎಲ್ಲರಿಗೂ ಇವೆ.

ಇದು ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ ಅವರ ಪ್ರತಿಪಾದನೆ. ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ 9ನೇ ವಾರ್ಷಿಕ ಸಮ್ಮೇಳನದಲ್ಲಿ ಎರಡನೇ ದಿನವಾದ ಶನಿವಾರ ‘ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ- ವಿವೇಕಾನಂದರ ಮಾರ್ಗ’ ವಿಷಯದ ಕುರಿತು ಮಾತನಾಡಿದರು.

ಭಗವಂತ ಎಲ್ಲರಿಗೂ ಬುದ್ಧಿ ಕೊಟ್ಟಿದ್ದಾನೆ. ಆದರೆ ಇದರ ಶಕ್ತಿ ಅರಿತು ಸದ್ಬಳಕೆ ಮಾಡಿಕೊಂಡವರು ಮಾತ್ರ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮುತ್ತಾರೆ. ಇಂತಹ ಸಾಧಕರಿಂದ ಸಮಾಜಕ್ಕೆ ಪರಿಣಾಮಕಾರಿ ಸೇವೆ ಸಿಗುತ್ತದೆ. ಸಮಾಜ ಸಹ ಇಂತಹವರಿಗೆ ಗೌರವ ನೀಡುತ್ತದೆ ಎಂದು ಹೇಳಿದರು.

ಶಾಲೆಯಲ್ಲಿ ಗುರುಗಳಿಂದಲೇ ದಡ್ಡ ಎನಿಸಿಕೊಂಡಿದ್ದ, ‘ನಿನ್ನ ಕೊಳಕು ಮುಖ ಇನ್ನೆಷ್ಟು ದಿನ ನಾವು ನೋಡಬೇಕು’ ಎಂದೆಲ್ಲ ಶಿಕ್ಷಕರಿಂದ ನಿಂದನೆ ಅನುಭವಿಸಿದ ಆಲ್ಬರ್ಟ್ ಐನ್‌ಸ್ಟೀನ್ ವಿಜ್ಞಾನಿ, ಸಂಶೋಧಕನಾಗಿ ಹೊರಹೊಮ್ಮಿ ಎರಡು ನೊಬೆಲ್ ಪ್ರಶಸ್ತಿ ಪಡೆದರು. ಬುದ್ಧಿಯ ಸದ್ಬಳಕೆಯಿಂದ ಮಾತ್ರ ಅವರಿಗೆ ಈ ಶಕ್ತಿ ಬಂತು. ನನ್ನ ಬದುಕಿನಲ್ಲಿ ನಾನು ನನ್ನ ಬುದ್ಧಿಯ ಕೇವಲ ಶೇ.25ರಷ್ಟನ್ನು (ನಾಲ್ಕಾಣೆ) ಮಾತ್ರ ಬಳಸಿಕೊಂಡಿದ್ದೇನೆ ಎಂದು ಐನ್‌ಸ್ಟೀನ್ ತಮ್ಮ ಆತ್ಮಕಥನದಲ್ಲಿ ಬರೆದಿದ್ದಾರೆ. ‘ನನ್ನಂತೆ ಎಲ್ಲರಿಗೂ ಭಗವಂತ ಅದ್ಭುತ ಬುದ್ಧಿಶಕ್ತಿ ಕೊಟ್ಟಿದ್ದಾನೆ. ಎಲ್ಲರಿಗೂ ಇಂಥ ಸಾಧನೆ ಮಾಡಲು ಸಾಧ್ಯ’ ಎಂದು ಐನ್‌ಸ್ಟೀನ್ ಪ್ರತಿಪಾದಿಸಿದ್ದಾರೆ. ಐನ್‌ಸ್ಟೀನ್ ನಾಲ್ಕಾಣೆ ಬುದ್ಧಿ ಬಳಸಿ ಎರಡು ನೊಬೆಲ್ ಪ್ರಶಸ್ತಿ ಪಡೆಯುವುದಾದರೆ ಪೂರ್ಣಬುದ್ಧಿ ಬಳಸಿಕೊಂಡಲ್ಲಿ ಎಂಟು ನೊಬೆಲ್ ಪ್ರಶಸ್ತಿ ಪಡೆಯಬಹುದು. ಇದು ಅಸಾಧ್ಯವೇನಲ್ಲ ಎಂದರು.

ನಮ್ಮೊಳಗಡೆ ದೊಡ್ಡ ಶಕ್ತಿ ಅಡಗಿದೆ. ಈ ಶಕ್ತಿಯ ಮುಖಾಂತರ ಎಲ್ಲವನ್ನು ಸಾಧಿಸಬಹುದು, ಎಲ್ಲವನ್ನೂ ಸೋಲಿಸಬಹುದು. ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವ ಸಾಧಕರಾಗಬಹುದು. ನಮ್ಮತನದ ಅರಿವು ಇರಬೇಕು. ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರದ ಮುಂದೆ ಎಲ್ಲ ಗೌಣ. ನಮ್ಮತನಗಳನ್ನು ಸ್ವೀಕರಿಸಿ ಪರಿಶೀಲನೆ ಮಾಡಬೇಕು. ಆದರೆ ಪಾಶ್ಚಾತ್ಯರದ್ದು ಏನಿದ್ದರೂ ಮೊದಲು ಪರಿಶೀಲಿಸಿ ನಂತರ ಸ್ವೀಕರಿಸಬೇಕು. ಇದೇ ಭಾರತ ಹಾಗೂ ಪಾಶ್ಚಿಮಾತ್ಯರ ನಡುವಿನ ಸಂಸ್ಕೃತಿ, ಸಂಸ್ಕಾರಕ್ಕೆ ಇರುವ ಅಂತರ ಎಂದು ವ್ಯಾಖ್ಯಾನಿಸಿದರು.

ನಿಜವಾಗುತ್ತಿದೆ ವಿವೇಕ ವಾಣಿ

ಕರ್ನಾಟಕ ಮುಂದೊಂದು ದಿನ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಸ್ವಾಮಿ ವಿವೇಕಾನಂದರು ಶತಮಾನದ ಹಿಂದೆ ಹೇಳಿದಂತಹ ಮಾತು ಈಗ ಅಕ್ಷರಶಃ ನಿಜವಾಗುತ್ತಿದೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು. ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ವೇಳೆ ಅನೇಕ ಸಮಾಜಮುಖಿ ಮಹಾತ್ಕಾರ್ಯಗಳಿಗೆ ಶಕ್ತಿ ತುಂಬಿದ್ದರು. ಮೈಸೂರಿನ ಒಡೆಯರ್ ಅವರ ಸೇವಾ ಕಾರ್ಯ ವಿಸ್ತರಣೆಗೆ ಸ್ಪೂರ್ತಿ ತುಂಬಿದ್ದರು. ಇಲ್ಲಿಗೆ ಭೇಟಿ ನೀಡಿದ ವೇಳೆ ಅವರು ವಿಸಿಟರ್‌ಬುಕ್‌ನಲ್ಲಿ ಮೈಸೂರು (ಕರ್ನಾಟಕ ರಾಜ್ಯ) ಮುಂದೆ ಬಹಳ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಬರೆದಿದ್ದರು. ಅವರು ಮಾತು ನಿಜವಾಗುತ್ತಿದೆ. ಕರ್ನಾಟಕ ತನ್ನ ಶಕ್ತಿ, ಸಾಮರ್ಥ್ಯ ವೃದ್ಧಿಸಿಕೊಂಡು ದೇಶ ಮಾತ್ರವಲ್ಲ, ವಿಶ್ವದ ಗಮನ ಸೆಳೆದಿದೆ. ವಿವೇಕಾನಂದರದ್ದು ಬಹಳ ದೂರದೃಷ್ಟಿತ್ವದ ಚಿಂತನೆಗಳು. ಹೀಗಾಗಿ ವಿವೇಕವಾಣಿ ಯಾವತ್ತೂ ಸುಳ್ಳಾಗಲ್ಲ ಎಂದು ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net