

ದಾಬಸ್‌ಪೇಟೆ: ದೇವರ ದಯೆಯಿಂದ ಎಲ್ಲೆಡೆ ಉತ್ತಮ ಮಳೆಯಾಗಿದೆ. ಆದ್ದರೂ ಕುಡಿಯಲು ನೀರಿನ ಅಭಾವವಿದೆ. ಹೀಗಾಗಿ ಜನರು ನೀರನ್ನು ಪೋಲು ಮಾಡಬಾರದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಪಂ ವ್ಯಾಪ್ತಿಯ ದೇವರಹೊಸಹಳ್ಳಿ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು. ಈ ವರ್ಷ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹೋಬಳಿಯ ಎಲ್ಲ ಕೆರೆಗಳು ತುಂಬುತ್ತಿವೆ. ಇದರಿಂದ ಅಂತರ್ಜಲಮಟ್ಟ ಏರಿಕೆ ಕಾಣಲಿದ್ದು, ಕೃಷಿಕರು ನೀರಿಗಾಗಿ ಪರದಾಟ ತಪ್ಪಲಿದೆ ಎಂದರು.
ಟಿಎಪಿಎಂಎಸ್ ಅಧ್ಯಕ್ಷ ಜಗಜ್ಯೋತಿ ಬಸವೇಶ್ವರ ಮಾತನಾಡಿ, ಕೆರೆ ತುಂಬಿರುವುದರಿಂದ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲರೂ ಸೇರಿ ಗಂಗಾ ಮಾತೆಗೆ ಬಾಗಿನ ಅರ್ಪಿಸಿದ್ದೇವೆ. ಪ್ರತಿ ವರ್ಷ ಮಳೆ ಬಿದ್ದು ಕೆರೆ ತುಂಬಿ ಬೆಳೆಗಳಿಗೆ ಹಾಗೂ ಕುಡಿಯಲು ನೀರು ಸಿಗಲಿ ಎಂದು ಪ್ರಾರ್ಥಿಸಿದರು.