ಬಳಕೆಗೆ ಮುಕ್ತವಾಗದ ಶೌಚಗೃಹ

2Kabbur1-Web
ಕಬ್ಬೂರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಉದ್ಘಾಟನೆಗೆ ಕಾದಿರುವ ಶೌಚಗೃಹಗಳು.
Published on

ಕಬ್ಬೂರು: ಪಟ್ಟಣ ಹಾಗೂ ಹಳ್ಳಿಗಳನ್ನು ಬಯಲು ಶೌಚಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂ. ಅನುದಾನ ಖರ್ಚು ಮಾಡುತ್ತಿದೆ. ಆದರೆ, ಕೆಲವೆಡೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಸ್ವಚ್ಛ ಭಾರತ ಅಭಿಯಾನ ಯಶಸ್ಸು ಕಾಣುತ್ತಿಲ್ಲ. ಇದಕ್ಕೆ ತಾಜಾ ನಿದರ್ಶನ ಎಂದರೆ ಕಬ್ಬೂರ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಶೌಚಗೃಹಗಳು ಉದ್ಘಾಟನೆಯಾಗದೆ ಹಾಗೇ ನಿಂತಿರುವುದು.

ಪಟ್ಟಣದಲ್ಲಿ 2018-19ನೇ ಸಾಲಿನ 14ನೇ ಹಣಕಾಸಿನ ಯೋಜನೆಯಡಿ ಅಂಬೇಡ್ಕರ್ ನಗರ ಹಾಗೂ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಲಾ ಎರಡು ಕಡೆ 12 ಶೌಚಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಶೌಚಗೃಹ ನಿರ್ಮಾಣವಾಗಿ ಎರಡು ವರ್ಷಗಳೇ ಗತಿಸಿವೆ. ಆದರೆ, ಅವುಗಳ ಉದ್ಘಾಟನೆಗೆ ಕಾಲ ಕೂಡಿಬಂದಿಲ್ಲ. ಇದರಿಂದ ಈ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಅಂಬೇಡ್ಕರ್ ನಗರ ಹಾಗೂ ಸರ್ಕಾರಿ ಆಸ್ಪತ್ರೆ ಹತ್ತಿರ ಹೆಚ್ಚಾಗಿ ಕಡುಬಡವರು ವಾಸವಾಗಿದ್ದಾರೆ. ಬಹಿರ್ದೆಸೆಗೆ ತೆರಳಲು ಗರ್ಭಿಣಿಯರು, ಮಹಿಳೆಯರು ಪರದಾಡುವಂತಾಗಿದೆ. ನೀರು, ವಿದ್ಯುತ್ ಸಂಪರ್ಕವಿಲ್ಲ: 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಗೃಹಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಉದ್ಘಾಟನೆಯನ್ನೂ ಮಾಡಿಲ್ಲ. ನೀರು ಹಾಗೂ ವಿದ್ಯುತ್ ಸಂಪರ್ಕ ಒದಗಿಸದೇ ಶೌಚಗೃಹಳನ್ನು ಸಾರ್ವಜನಿಕರು ಅವುಗಳನ್ನು ಬಳಸುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಶೀಘ್ರ ಸೂಕ್ತ ಕ್ರಮ ಕೈಗೊಂಡು ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಬ್ಬೂರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶೌಚಗೃಹ ನಿರ್ಮಾಣ ಮಾಡಿ ಎರಡು ವರ್ಷ ಕಳೆದಿವೆ. ಶೌಚಗೃಹಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶೌಚಗೃಹ ಬಳಕೆಗೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು.| ಶಾಲುತಾಯಿ ಸೋಮನಾಥ ಮದಿಹಳ್ಳಿ ಸ್ಥಳೀಯ ನಿವಾಸಿಕಬ್ಬೂರ ಪಟ್ಟಣದ ಶೌಚಗೃಹ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲಾಗುವುದು.| ದುರ್ಯೋಧನ ಐಹೊಳೆ ಶಾಸಕ

| ನಾಗಭೂಷಣ ಮಠಪತಿ ಕಬ್ಬೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net