ಯುವಜನತೆಯನ್ನು ಸರಿಯಾಗಿ ಬಳಸಿಕೊಳ್ಳಿ

18M.D.R.11
ನನ್ನ ಮಣ್ಣು. ನನ್ನ ದೇಶ ತಾಲೂಕು ಮಟ್ಟದ ಕಳಶ ಯಾತ್ರೆಯನ್ನು ಶಾಸಕ ಕೆ.ಎಂ.ಉದಯ್ ಬರಮಾಡಿಕೊಂಡರು. ನಟರಾಜ್, ನರಸಿಂಹಮೂರ್ತಿ, ಲೋಕನಾಥ್, ಅರುಣ್‌ಕುಮಾರ್, ಡಿ.ಪಿ.ಸ್ವಾಮಿ, ನಾರಾಯಣ್ ಇದ್ದರು.
Published on

ಮದ್ದೂರು: ನಮ್ಮ ದೇಶದಲ್ಲಿ ಪ್ರಸ್ತುತ ಯುವಜನತೆಯ ಸಂಖ್ಯೆ ಶೇ.45ರಷ್ಟಿದ್ದು ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಶಿವಪುರ ಸತ್ಯಾಗ್ರಹಸೌಧದಲ್ಲಿ ಬುಧವಾರ ಜಿಲ್ಲಾಡಳಿತ. ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಮದ್ದೂರು ಪುರಸಭೆ, ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬ್ಯಾಂಕ್ ಆಫ್ ಬರೋಡ, ಸಿ.ಎಸ್.ಸಿ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನನ್ನ ಮಣ್ಣು, ನನ್ನ ದೇಶ ತಾಲೂಕು ಮಟ್ಟದ ಕಳಶ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಜನತೆ ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳುವ ಜತೆಗೆ ದೇಶದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ನಟರಾಜ್ ಮಾತನಾಡಿ, ಒಂದು ವರ್ಷದಿಂದ ಪ್ರತಿಯೊಂದು ಗ್ರಾಮದಿಂದ ಮಣ್ಣು ಸಂಗ್ರಹ ಮಾಡಲಾಗಿದ್ದು ಅ.29ರಂದು ದೆಹಲಿಯಲ್ಲಿ ಈ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ಜಿಲ್ಲೆಯಲ್ಲಿ ಸಂಗ್ರಹಿಸಿದ ಮಣ್ಣನ್ನು ಒಂದು ಕಳಶದಲ್ಲಿ ತುಂಬಿ ಜಿಲ್ಲೆಗೆ ಎಂಟು ಜನರಂತೆ ಯವ ಜನರನ್ನು ದೆಹಲಿಗೆ ಕಳುಹಿಸಿಕೊಡಲಾಗುವುದು ಎಂದರು.

ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ. ನನ್ನ ಮಣ್ಣು ನನ್ನ ದೇಶ ಅಂಗವಾಗಿ ಗ್ರಾಮ ಮಟ್ಟದಲ್ಲಿ ಸಂಗ್ರಹಿಸಿದ ಮಣ್ಣನ್ನು ತಾಲೂಕು ಮಟ್ಟದಿಂದ ದೆಹಲಿಗೆ ಕಳುಹಿಸುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದ ನಂತರ ಅಮೃತ ಕಳಶಯಾತ್ರೆ ವಿವಿಧ ಜಾನಪದ ಕಲಾತಂಡದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಬ್ಯಾನರ್‌ನಲ್ಲಿ ಹತ್ತಾರು ಇಲಾಖೆಗಳ ಹೆಸರು ರಾರಾಜಿಸುತ್ತಿದ್ದು ಕಾರ್ಯಕ್ರಮದಲ್ಲಿ ಮಾತ್ರ ಬೆರಳೆಣಿಕೆ ಅಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸಿಹಿ ತಿಂಡಿ ವ್ಯವಸ್ಥೆಯನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಕಲ್ಪಿಸದೇ ಇರುವುದು ಮುಜುಗರ ಉಂಟುಮಾಡಿತು.

ತಹಸೀಲ್ದಾರ್ ನರಸಿಂಹಮೂರ್ತಿ, ಜಿಲ್ಲೆ ಅಂಚೆ ಇಲಾಖೆ ಅಧಿಕಾರಿ ಲೋಕನಾಥ್, ಅರುಣ್‌ಕುಮಾರ್, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಮದ್ದೂರು ಮಹಿಳಾ ಕಾಲೇಜಿನ ಪ್ರಾಂಶುಪಾಲ ನಾರಾಯಣ್, ಯುವ ಪ್ರಶಸ್ತಿ ಪುರಸ್ಕೃತರಾದ ಕುಮಾರ್, ಸ್ವಾಮಿ, ಅನಿಲ್‌ಕುಮಾರ್, ನೆಹರು ಯುವ ಕೇಂದ್ರದ ಸ್ವಯಂ ಸೇವಕ ಹರ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net