ಹಕ್ಕುಗಳನ್ನು ಬಳಸಿ ಸಮಾಜದ ಮುಖ್ಯವಾಹಿನಿಗೆ ಬರಲಿ

17 gkp 07
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಉದ್ಘಾಟಿಸಿದ ತಾಲೂಕು ಮಹಿಳಾ ಮತ್ತು ಮಕ್ಕಳ ಅಪ್ತ ಸಮಾಲೋಚಕರಾದ ಅನುಷಾ. ಪ್ರೌಢಶಾಲಾ ವಿದ್ಯಾರ್ಥಿ ಕುಮಾರಿ ಲೇಖಾ, ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು.
Published on

ಗೋಣಿಕೊಪ್ಪ: ಮಕ್ಕಳ ಹಕ್ಕುಗಳು ಹದಿನೆಂಟು ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಶಕ್ತಿ ತುಂಬಿದೆ. ಬದುಕುವ, ರಕ್ಷಣೆಯ, ವಿಕಸನ, ಶಿಕ್ಷಣ ಮತ್ತು ಭಾಗವಹಿಸುವ ಹಕ್ಕುಗಳನ್ನು ಬಳಸಿಕೊಂಡು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಪ್ತ ಸಮಾಲೋಚಕಿ ಅನುಷಾ ಸಲಹೆ ನೀಡಿದರು.

ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಳೆಲೆ ಹೋಬಳಿಯ ಕುಗ್ರಾಮಗಳಾದ ಮಲ್ಲೂರು, ಕುಂಬಾರಕಟ್ಟೆ ರಾಜಾಪುರ, ವಡ್ಡರಮಾಡು, ನಿಟ್ಟೂರು ಭಾಗಗಳಿಂದ ಶಾಲೆಗಳಿಗೆ ಬಂದು ಹೋಗಲು ಬಸ್ ಸಂಚಾರ ಇಲ್ಲದಿರುವ ಬಗ್ಗೆ ವಿದ್ಯಾರ್ಥಿಗಳು ಸಭೆಯ ಮುಂದಿಟ್ಟು ಗಮನ ಸೆಳೆದರು.

ವಿದ್ಯಾರ್ಥಿ ಸುಶ್ಮಿತಾ ಮಾತನಾಡಿ, ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾರ್ಗ ಸಂಖ್ಯೆ 79/80 ಮತ್ತು 142ರಲ್ಲಿ ಸಂಚಾರವನ್ನು ಸರಿಯಾಗಿ ನಡೆಸುತ್ತಿಲ್ಲ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ತಾಯಂದಿರು ಉಚಿತ ಸೇವೆಯಿಂದ ವಂಚಿತರಾಗಿದ್ದಾರೆಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿ ತಕ್ಷಣದಿಂದಲೇ ಬಸ್ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು.

ಪ್ರಾಥಮಿಕ ಶಾಲಾ ವಿದ್ಯಾರ್ಥಿ ಮಾತನಾಡಿ, ಗೌತಮ್ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೇಡಿಕೆ ಸಲ್ಲಿಸಿದರು. ಅಲ್ಲದೆ ಶಾಲೆಗೆ ಸುಸಜ್ಜಿತ ಕಾಂಪೌಂಡ್, ಮೈದಾನ , ತರಗತಿಗಳಿಗೆ ಉತ್ತಮ ಗುಣಮಟ್ಟದ ಕಪ್ಪು ಹಲಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ ಮಾತನಾಡಿ, ಮಕ್ಕಳ ಎಲ್ಲ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿಗಳು ಶಾಲೆಗಳನ್ನು ಅರ್ಧಕ್ಕೆ ಬಿಡುವ ಮತ್ತು ನಿರಂತರ ಗೈರು ಹಾಜರಾಗುವ ಪರಿಪಾಠವನ್ನು ಬಿಟ್ಟು ಶೈಕ್ಷಣಿಕವಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಸಶಕ್ತ ದೇಶ ಕಟ್ಟಬೇಕೆಂದು ಜಾನಕಿ ಕಾವೇರಪ್ಪ ಕರೆ ನೀಡಿದರು.

ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲಾ ವಿದ್ಯಾರ್ಥಿ ಕುಮಾರಿ ಲೇಖಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಪೊಡಮಾಡ ಸುಖೇಶ್ ಭೀಮಯ್ಯ, ಗ್ರೇಸಿ ಪ್ರಮೀಳಾ, ಪ್ರಾಂಶುಪಾಲ ಪ್ರಭು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್, ಶಿಕ್ಷಕರಾದ ಸುಬ್ಬಯ್ಯ, ನಾಗಶ್ರೀ, ರಾಘವೇಂದ್ರ ಉಪಸ್ಥಿತರಿದ್ದರು.

17 ಜಿಕೆಪಿ 08: ಮಕ್ಕಳ ಗ್ರಾಮ ಸಭೆಯಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿರುವ ಮಕ್ಕಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net