ಹುಂಡಿ ಹಣ ಅಭಿವೃದ್ಧಿ ಕೆಲಸಕ್ಕೆ ಬಳಸಿ

CLK SABHE 27
Published on

ಚಳ್ಳಕೆರೆ: ಮಧ್ಯಕರ್ನಾಟಕದ ಪ್ರಸಿದ್ಧಿ ಗೌರಸಮುದ್ರ ಮಾರಮ್ಮ ಜಾತ್ರೆ ಸೆ.19ರ ಮಂಗಳವಾರ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳುವಂತೆ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಸೂಚಿಸಿದರು.

ತಾಲೂಕು ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರ ಹುಂಡಿಗಳಿಗೆ ಭಕ್ತರು ಹಾಕುವ ಕಾಣಿಕೆ ಜನಪಯೋಗ ಕಾರ್ಯಗಳಿಗೆ ಬಳಕೆ ಆಗಬೇಕು. ಈ ಹಿನ್ನೆಲೆಯಲ್ಲಿ ದೇಗುಲದ ಪೂರಕವಾಗಿ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕು ಎಂದರು.

ಜಾತ್ರೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ದೇವಸ್ಥಾನಗಳಿಗೆ ಬರುವ ಭಕ್ತರ ಅನುಕೂಲಕ್ಕೆ ಯಾತ್ರಿ ನಿವಾಸ, ಶೌಚಗೃಹ, ಭವನಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಸ್ವಚ್ಛತೆಗೆ ಗಮನಹರಿಸಬೆಕು. ಸಂಚಾರ ಅನುಕೂಲಕ್ಕೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಸೂಚಿಸಿದರು.

ಗೌರಸಮುದ್ರ ಗ್ರಾಪಂ ಅಧ್ಯಕ್ಷ ಓಬಯ್ಯ, ಸದಸ್ಯರಾದ ಶುಭಾಷಿಣಿ, ಶಶಿಕುಮಾರ್ ಮಾತನಾಡಿ, ಜಾತ್ರೆ ನಡೆಯುವ ಸ್ಥಳದಲ್ಲಿ ಎತ್ತಿನ ಗಾಡಿಗಳ ನಿಲುಗಡೆ ಸ್ಥಳ ಬಿಟ್ಟು ಉಳಿದ ಅಂಗಡಿ ವಹಿವಾಟುಗಳ ಜಾಗಗಳಿಗೆ ಹರಾಜು ಮಾಡಬೇಕು ಎಂದರು.

ದೇವಸ್ಥಾನದ ಹುಂಡಿ ಹಣ ಮುಜರಾಯಿ ಇಲಾಖೆಗೆ ಬಳಕೆ ಮಾಡಿಕೊಳ್ಳದೆ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಬಳಸಬೇಕು. ತಾತ್ಕಾಲಿಕ ವ್ಯವಸ್ಥೆ ಬದಲು ಶೌಚಗೃಹ, ಕುಡಿಯುವ ನೀರಿನ ಶಾಶ್ವತ ಅನುಕೂಲ ಮಾಡಬೇಕು. ಮೂರು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರಬೇಕು. ರಸ್ತೆ ಮಾರ್ಗಗಳಿಗೆ ಡಾಂಬರೀಕರಣ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ಜಾತ್ರಾ ಸ್ಥಳದಲ್ಲಿ ಭಕ್ತರ ಯಾತ್ರಿ ನಿವಾಸ ನಿರ್ಮಾಣಕ್ಕೆ 2 ಎಕರೆ ಭೂಮಿ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಪ್ರವಾಸೋದ್ಯಮ ಇಲಾಖೆ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ದೇವರೆಡ್ಡಿಹಳ್ಳಿ ಗ್ರಾಪಂ ಅಧ್ಯಕ್ಷೆ ದಿವ್ಯಾಪ್ರಕಾಶ್, ತಾಪಂ ಇಒ ಸಂತೋಷ್, ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ, ಬಿಇಒ ಕೆ.ಎಸ್.ಸುರೇಶ್, ಕೆಇಬಿ ಎಇಇ ತಿಮ್ಮರಾಯಪ್ಪ, ವಿಜಯಭಾಸ್ಕರ್, ಎನ್.ಕಾವ್ಯಾ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net