

ಕೋಲಾರ: ಮಕ್ಕಳಲ್ಲಿ ಆಸಕ್ತಿ ಮೂಡಿಸುವ ತಂತ್ರಗಾರಿಕೆಯೊಂದಿಗೆ ಪಠ್ಯ ಬೋಧನಾ ಕ್ರಮ ಉತ್ತಮಪಡಿಸಿಕೊಂಡು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡಲು ಬದ್ಧ್ದತೆಯಿಂದ ಕೆಲಸ ಮಾಡಿ ಎಂದು ಜಿಲ್ಲೆಯ ಎಲ್ಲ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಕೃಷ್ಣಮೂರ್ತಿ ಸಲಹೆ ನೀಡಿದರು.
ನಗರದ ಮೆಥೋಡಿಸ್ಟ್ ಶಾಲಾ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳ ವಿವಿಧ ವಿಷಯಗಳ ಅತಿಥಿ ಶಿಕ್ಷಕರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಅತಿಥಿ ಶಿಕ್ಷಕರೆಂಬ ಕೀಳಿರಿಮೆ ಅಗತ್ಯವಿಲ್ಲ, ಅನೇಕ ಶಾಲೆಗಳ ಉತ್ತಮ ಫಲಿತಾಂಶಕ್ಕೆ ನಿಮ್ಮ ಕೊಡುಗೆಯೂ ಅಪಾರವಾಗಿದೆ. ಕಾಯಂ ಶಿಕ್ಷಕರಿಲ್ಲದ ಕಡೆಗಳಲ್ಲಿ ನೀವು ಕಾರ್ಯನಿರ್ವಹಿಸಿ ಜಿಲ್ಲೆಗೆ ಉತ್ತಮ ಫಲಿತಾಂಶವನ್ನೂ ತಂದುಕೊಟ್ಟಿದ್ದೀರಿ ಎಂದು ಅಭಿನಂದಿಸಿದರು.ಅತಿಥಿ ಶಿಕ್ಷಕರಿಗೆ ಸರ್ಕಾರ ನಿಗದಿಪಡಿಸಿರುವ ಸಂಭಾವನೆಯನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ ಎಂದು ತಿಳಿಸಿದರು.ಮಕ್ಕಳಿಗೆ ತಾತ್ವಿಕ ಬೋಧನೆಗಿಂತ ಪ್ರಾಯೋಗಿಕ ಬೋಧನೆ ಅತಿ ಬೇಗ ಮನಮುಟ್ಟುತ್ತದೆ. ಈ ಹಿನ್ನಲೆಯಲ್ಲಿ ಕಲಿಕೋಪಕರಣ ಹಾಗೂ ಶಾಲೆಯ ಪ್ರಾಯೋಗಿಕ ಸಲಕರಣೆಗಳನ್ನು ಬಳಸಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ನಿಮ್ಮ ಬೋಧನಾ ವಿಧಾನ ಬದಲಿಸಿಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು, ಆ ವೃತ್ತಿಗೆ ವಂಚನೆ ಮಾಡದಿರಿ, ನಿಮ್ಮಿಂದ ಶಿಕ್ಷಣ ಪಡೆಯುವ ಮಕ್ಕಳು ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ, ನೀವು ಅವರ ಮನದಲ್ಲಿ ಅಚ್ಚಳಿಯದೇ ಉಳಿಯಲು ನಿಮ್ಮ ಬೋಧನಾ ಕ್ರಮ ಅತಿ ಪರಿಣಾಮಕಾರಿಯಾಗಿರಬೇಕು ಎಂದು ತಿಳಿಸಿದರು.ಜಿಲ್ಲಾ ಶಿಕ್ಷಣಾಧಿಕಾರಿ ಸಗೀರಾ ಅಂಜುಂ ಮಾತನಾಡಿ, ಅತಿಥಿ ಶಿಕ್ಷಕರಿಗೂ ವಿಶೇಷ ತರಬೇತಿ, ಕಾರ್ಯಾಗಾರ ನಡೆಸುವ ಮೂಲಕ ಇಲಾಖೆ ಉತ್ತಮ ಕೆಲಸ ಮಾಡಿದ್ದು, ನೀವು ಬೋಧನೆಯಲ್ಲಿ ಎಷ್ಟೇ ಸಮರ್ಥರಾದರೂ ಅದು ಮಕ್ಕಳಿಗೆ ತಲುಪಿದಾಗ ಮತ್ತು ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.