

ಶಿಗ್ಗಾಂವಿ: ಜಾನಪದ ಕಲಾಪ್ರಾಕಾರದ ಮೂಲಕ್ಕೆ ಧಕ್ಕೆ ಬರಹ ರೀತಿಯಲ್ಲಿ ನಮ್ಮ ಪೂರ್ವಜರ ಜನಪದ ಕಲೆಗಳನ್ನು ಬಳಸಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಹಳಷ್ಟಿದೆ. ಜನಪದ ಕಲೆಗಳು ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರಚಾರ ಮಾಡುವ ಬಹುಮುಖ್ಯ ಮಾಧ್ಯಮವಾಗಿವೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಅವರು ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಹಾವೇರಿ ಮತ್ತು ಶಿಗ್ಗಾಂವಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪರದೆ ಸಿನೆಮಾ ವೇದಿಕೆ ಉದ್ಘಾಟನೆ ಹಾಗೂ ಸಮಾಜದ ಮೇಲೆ ನವ ಮಾಧ್ಯಮಗಳ ಪ್ರಭಾವ ಮತ್ತು ಪರಿಣಾಮ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಗಳ ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿರುವ ಜನಪದ ಕಲಾ ಪ್ರಕಾರಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವ ಚಿಂತನೆ ನಡೆಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಮಾತನಾಡಿ, ಮಾಧ್ಯಮ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡುವ ಮೂಲಕ ಸಮಾಜವನ್ನು ಸರಿ ದಾರಿಗೆ ತಂದು ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿವೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಅವರು ಪರದೆ ಸಿನೆಮಾ ವೇದಿಕೆ ಉದ್ಘಾಟಿಸಿ ಮಾತನಾಡಿ, ಐವತ್ತು, ಅರವತ್ತರ ದಶಕದ ಸಂದರ್ಭದಲ್ಲಿ ಕನ್ನಡದ ಸಿನೆಮಾಗಳು ಇಲ್ಲ ಕನ್ನಡಿಗರನ್ನು ಒಂದುಗೂಡಿಸುವ ಕಲ್ಪನೆಯನ್ನು ಹೊಂದಿರುತ್ತಿದ್ದವು, ಕನ್ನಡದ ಪ್ರಜ್ಞೆಯನ್ನು ಬೆಳೆಸುವ ಕೀರ್ತಿ ಕನ್ನಡದ ಸಿನೆಮಾಗಳಿಗೆ ಸಲ್ಲುತ್ತದೆ. ಸಕಾರಾತ್ಮಕ ಪ್ರಭಾವ ಬೀರುವ ಅಂಶಗಳು ಆ ಸಿನೆಮಾಗಳಲ್ಲಿ ಇರುತ್ತಿದ್ದವು ಎಂದರು.
ಪತ್ರಕರ್ತ ಡಾ.ಬಂಡು ಕುಲಕರ್ಣಿ ಅವರು, ‘ನವ ಮಾಧ್ಯಮಗಳ ಪ್ರಭಾವ ಮತ್ತು ಪರಿಣಾಮ’ ಕುರಿತು ಮಾತನಾಡಿದರು.
ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ವಿಶ್ವವಿದ್ಯಾಲಯವು ಹಳ್ಳಿ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಡುತ್ತಿದೆ ಎಂದರು.
ಮîೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ. ಸಾಲಿ, ಕವಿವಿ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕ ಡಾ. ಸಂಜಯಕುಮಾರ ಮಾಲಗತ್ತಿ, ಹಿರಿಯ ಪತ್ರಕರ್ತ ವಿಜಯ ಹೂಗಾರ ಮಾತನಾಡಿದರು. ಕಾರ್ಯಕ್ರಮ ಸಂಚಾಲಕ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ವೆಂಕನಗೌಡ ಪಾಟೀಲ ಪ್ರಾಸ್ತ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹಿರೇಮಠ, ತಾಲೂಕಾಧ್ಯಕ್ಷ ಪರಮೇಶ ಲಮಾಣಿ, ವಿವಿ ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್, ಇತರರಿದ್ದರು.
ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ, ಜನಪದ ಕಲಾವಿದ ಶರೀಫ ಮಾಕಪ್ಪನವರ ಹಾಗೂ ಸಹಾಯಕ ಪ್ರಾಧ್ಯಪಕ ಶಿವಾನಂದ ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು.