

ಮಡಿಕೇರಿ: ಅಕ್ಷರ ದಾಸೋಹದಡಿ ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸುವ ಆಹಾರ ಪದಾರ್ಥ ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ದೂರುಗಳು ಬರದಂತೆ ಎಚ್ಚರವಹಿಸಬೇಕು ಎಂದು ಜಿ.ಪಂ.ಸಿಇಒ ಡಾ.ಎಸ್.ಆಕಾಶ್‌ಡಿವರು ಸ್ಪಷ್ಟ ನಿರ್ದೇಶನ ನೀಡಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ೨೦೨೨-೨೩ ನೇ ಸಾಲಿನ ಜಿಲ್ಲಾ ವಲಯದ ಇಲಾಖಾ ಕಾರ್ಯಕ್ರಮಗಳ ಜನವರಿ ಅಂತ್ಯದವರೆಗಿನ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಯಾವುದೇ ಕಾರಣಕ್ಕೂ ಅವಧಿ ಮೀರಿದ ಆಹಾರ ಪದಾರ್ಥ ದಾಸ್ತಾನು ಮಾಡಬಾರದು ಮತ್ತು ಉಪಯೋಗಿಸದಂತೆ ಮುನ್ನೆಚ್ಚರ ವಹಿಸುವಂತೆ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗೆ ಜಿ.ಪಂ.ಸಿಇಒ ಅವರು ತಾಕೀತು ಮಾಡಿದರು.
ಉತ್ತಮ ಗುಣಮಟ್ಟದ ಬೇಳೆ, ಅಕ್ಕಿ, ಎಣ್ಣೆ ಹಾಗೂ ಉತ್ತಮ ತರಕಾರಿ ಇತರ ಆಹಾರ ಪದಾರ್ಥಗಳನ್ನು ಬಳಸಬೇಕು. ಪ್ರಸಕ್ತ ಆರ್ಥಿಕ ವರ್ಷ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವುದರಿಂದ ಜಿ.ಪಂ.ವತಿಯಿಂದ ಲಿಂಕ್ ಡಾಕ್ಯುಮೆಂಟ್ ಮೂಲಕ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸಿ, ಶೇ.೧೦೦ ರಷ್ಟು ಪ್ರಗತಿ ಸಾಧಿಸುವಂತೆ ಜಿ.ಪಂ.ಸಿಇಒ ರವರು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಧ್ಯಾಹ್ನದ ಬಿಸಿ ಊಟ ಯೋಜನೆ, ಅತಿಥಿ ಶಿಕ್ಷಕರಿಗೆ ಕಾಲ ಮಿತಿಯಲ್ಲಿ ವೇತನ ಪಾವತಿಸುವುದು, ವಿವೇಕ ಯೋಜನೆಯಡಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮತ್ತಿತರ ಸಂಬಂಧ ಪ್ರಗತಿ ಸಾಧಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ವಿವೇಕ ಯೋಜನೆಯಡಿ ೬೦ ಕೊಠಡಿಗಳು ನಿರ್ಮಾಣವಾಗುತ್ತಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಯ್ಯರವರು ಮಾಹಿತಿ ನೀಡಿದರು.
ಜಿ.ಪಂ.ಎಂಜಿನಿಯರ್ ವಿಭಾಗಕ್ಕೆ ವಹಿಸಲಾಗಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಆರ್ಥಿಕ ಪ್ರಗತಿ ಸಾಧಿಸುವಂತೆ ಸೂಚಿಸಿದ ಜಿ.ಪಂ.ಸಿಇಒ ಡಾ.ಆಕಾಶ್‌ರವರು, ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ ೩೫೪.೭೨ ಲಕ್ಷ ರೂ. ಒದಗಿಸಲಾಗಿದೆ. ಶೇ.೫೦ ರಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಆದಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆರ್ಥಿಕ ಪ್ರಗತಿ ಸಾಧಿಸುವಂತೆ ಹೇಳಿದರು.
ಕೆರೆಗಳ ಅಭಿವೃದ್ಧಿ, ವಿವಿಧ ಇಲಾಖೆಗಳ ಕಚೇರಿಗಳ ನಿರ್ವಹಣೆ ಮತ್ತು ದುರಸ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈಗಾಗಲೇ ಆಗಿರುವ ಕಾಮಗಾರಿ, ಜತೆಗೆ ವಿವಿಧ ಯೋಜನೆಗಳು ಸಂಬಂಧ ತ್ವರಿತವಾಗಿ ವರದಿ ನೀಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಆಸ್ಪತ್ರೆಗಳನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು, ಜೊತೆಗೆ ಜಿಲ್ಲಾ ಆಯುಷ್ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಲಹೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕಲ್ಪಿಸುವುದು. ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವಸತಿ ಶಾಲೆಗಳ ನಿರ್ವಹಣೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಈ ಇಲಾಖೆಗಳಿಗೆ ಜಿ.ಪಂ.ವತಿಯಿಂದ ಅನುದಾನ ನೀಡಲಾಗಿದ್ದು, ಸರಿಯಾಗಿ ವಿನಿಯೋಗಿಸುವಂತೆ ಜಿ.ಪಂ.ಸಿಇಒರವರು ಹೇಳಿದರು.
ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ನಿರ್ವಹಣೆ, ಹೀಗೆ ಹಲವು ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ, ಸಹಕಾರ, ಹೀಗೆ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಯೋಜನಾ ನಿರ್ದೇಶಕ ರಾಜಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್‌ಖಾನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಯ್ಯ, ಜಿ.ಪಂ. ಇಇ ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಬಿಸಿಎಂ ಇಲಾಖಾ ಅಧಿಕಾರಿ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್ ಇತರರಿದ್ದರು.