

ಮೈಸೂರು: ಘನತ್ಯಾಜ್ಯ ನಿರ್ವಹಣೆಗೆ ಸಮುದಾಯದ ಸಹಭಾಗಿತ್ವ ಬಳಸಿಕೊಳ್ಳಬೇಕು ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ಹೇಳಿದರು.
ಕಲಾಮಂದಿರದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2023 ಪ್ರಶಸ್ತಿ ಪ್ರದಾನ, ಸ್ವಚ್ಛತಾ ಹೀ ಸೇವಾ ಜಾಗೃತಿ ಕಾರ್ಯಕ್ರಮದಲ್ಲಿ ‘ಗ್ರಂಥ ಮಿತ್ರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಬೇಕು. ದ್ರವ ತ್ಯಾಜ್ಯ ನಿರ್ವಹಣೆ, ಬ್ಲಾಕ್ ವಾಟರ್ ಮ್ಯಾನೇಜ್‌ಮೆಂಟ್ ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಬೇಕು. ನರೇಗಾ ಮೂಲಕ ಉದ್ಯೋಗ ನೀಡಿ ಪ್ರತಿ ಗ್ರಾಮವನ್ನು ಶುಚಿಯಾಗಿಡಲು ಕಾರ್ಯೋನ್ಮುಖವಾಗಬೇಕು ಎಂದು ನುಡಿದರು.
ಗ್ರಾಮ ಪಂಚಾಯಿತಿಗಳು ಗ್ರಂಥಾಲಯಕ್ಕೆ ಕಟ್ಟಡ ನಿರ್ಮಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಸ್ತ್ರೀಶಕ್ತಿ ಸಂಘದ ಮಹಿಳೆಯನ್ನು ನೋಂದಣಿಗೆ ಆದ್ಯತೆ ಕೊಡಬೇಕು. ಎಲ್ಲರಿಗೂ ಪಂಚಾಯಿತಿ ವತಿಯಿಂದಲೇ ಗುರುತಿನ ಚೀಟಿ ನೀಡಬೇಕು ಎಂದು ಕೆ.ಎಂ. ಗಾಯತ್ರಿ ಹೇಳಿದರು.
ಘನತ್ಯಾಜ್ಯ ನಿರ್ವಹಣೆಯಲ್ಲಿ ವೆಲ್ಲೂರು ಮಾದರಿಯನ್ನು ರೂಪಿಸಿರುವ ಭಾರತ ಸರ್ಕಾರದ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸ್ ಅವರು ಘನತ್ಯಾಜ್ಯ ನಿರ್ವಹಣೆಯ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ತರಬೇತಿ ನೀಡಿದರು.
ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿಯನ್ನು ಪೈಲೆಟ್ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡು ಘನ ತ್ಯಾಜ್ಯ ನಿರ್ವಹಣೆ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುವಂತೆ ಮಾಡಿದ ಯಶಸ್ವಿ ಕಥನದೊಂದಿಗೆ ತಮ್ಮ ಉಪನ್ಯಾಸ ಆರಂಭಿಸಿದರು.
ಉತ್ಪತ್ತಿಯಾಗುವ ಕಸವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ನಂಬಿದ್ದೇವೆ. ಕಸ ನೋಡಿದಾಗ ನಮಗೆ ಕಿರಿಕಿರಿಯಾಗುತ್ತದೆ. ಕಸಕ್ಕೆ ಒಂದು ಕಳಂಕವಿದೆ. ಕಸದ ಬಗೆಗಿನ ನಮ್ಮ ಮನೋಭಾವ ಬದಲಾದರೆ ಕಸವೂ ರಸವಾಗುತ್ತದೆ. ಚಿನ್ನದ ಬೆಲೆ (ಗೋಲ್ಡ್ ಗಾರ್ಬೆಜ್) ತರುತ್ತದೆ ಎಂದು ವಿವರಿಸಿದರು.
ಕಸವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಶೇ.60ರಷ್ಟು ಸಾವುಗಳಿಗೆ ಕಾರಣವಾಗಿದೆ. ನಾವು ಎಸೆದ ಕಸದಲ್ಲಿ ನಮಗೆ ಕಚ್ಚುವ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತಿದೆ ಎಂದು ನಾವು ಎಂದಾದರೂ ಭಾವಿಸಿದ್ದೇವೆಯೇ? ಎಂದು ಪ್ರಶ್ನಿಸಿದರು. ಸಮರ್ಪಕವಾದ ರೀತಿಯಲ್ಲಿ ಕಸವನ್ನು ವಿಂಗಡಿಸಿ ಸದ್ಬಳಕೆ ಮಾಡಿದರೆ ಸಾಕಷ್ಟು ಲಾಭವಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸಮಾರಂಭ ಉದ್ಘಾಟಿಸಿದರು. ಜಿಪಂ ಉಪ ಕಾರ್ಯದರ್ಶಿ ಕೃಷ್ಣರಾಜು, ಸಹಾಯಕ ಕಾರ್ಯದರ್ಶಿ ಕುಲದೀಪ್, ಸಹಾಯಕ ಯೋಜನಾಧಿಕಾರಿ ಸುಬ್ರಮಣ್ಯ ಶರ್ಮ, ಆಡಳಿತ ಶಾಖೆ ಅಧೀಕ್ಷಕ ಮಹದೇವಸ್ವಾಮಿ ಇದ್ದರು.