ಮಣ್ಣಿನ ಫಲವತ್ತತೆಗೆ ಸಾವಯವ ಗೊಬ್ಬರ ಬಳಸಿ

16M.D.R.3
Published on

ಮದ್ದೂರು: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಬುಧವಾರ ರಾಷ್ಟ್ರೀಯ ಆಹಾರ ಭದ್ರಾತಾ ಯೋಜನೆಯಡಿ ಉದ್ದು, ರಾಗಿ ಸಾಲು ಬಿತ್ತನೆ ಬೀಜಗಳ ವಿತರಣೆ ಸೇರಿದಂತೆ ಕೃಷಿ ಯಂತ್ರೋಪಕರಣಗಳ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದಿಂದ ರೈತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅದರ ಬಗ್ಗೆ ರೈತರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.


ರೈತರು ರಾಸಾಯನಿಕ ರಸಗೊಬ್ಬರಗಳಿಗಿಂತ ಸಾವಯವ ಗೊಬ್ಬರಗಳನ್ನು ಹೆಚ್ಚಿಗೆ ಬಳಸಲು ಗಮನಹರಿಸಬೇಕು ಎಂದ ಅವರು, ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದರ ಜತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.


ತಾಲೂಕಿನ ಕೆಲ ಹೋಬಳಿಗಳಲ್ಲಿ ಫಲಾನುಭವಿ ರೈತರಿಗೆ ಫಸಲ್ ಬಿಮಾ ಯೋಜನೆಯಡಿ ವಿಮೆಯ ಹಣ ದೊರೆಯದಿರುವ ಬಗ್ಗೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳುವ ಬಗ್ಗೆ ಗಮನಹರಿಸಿ ಇದನ್ನು ಸರ್ಕಾರದ ಗಮನಕ್ಕೂ ತರುವ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಕೆ.ಪಿ.ದೊಡ್ಡಿ ಶಿವರಾಮು, ಉಪಾಧ್ಯಕ್ಷ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ನಿರ್ದೇಶಕರಾದ ಶಿವಣ್ಣ, ನಾಗರಾಜು, ಪುಟ್ಟಸ್ವಾಮಿ, ವೆಂಕಟಾಚಲಯ್ಯ, ಗುರುಲಿಂಗಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ, ಅಧಿಕಾರಿಗಳಾದ ರೂಪಾ, ಗವಾಸ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net